ನವದೆಹಲಿ: ‘ಮಣಿಪುರವು ಎರಡು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೂಗಿನ ಅಡಿಯಲ್ಲೇ ದೆಹಲಿ ಗಲಭೆಗಳು ನಡೆದವು. ಪಹಲ್ಗಾಮ್‌ನಲ್ಲಿ ಅಮಾಯಕರ ಹತ್ಯೆ ಮಾಡಲಾಯಿತು. ಆದರೂ ಶಾ ಅವರು ಇನ್ನೂ ಕುರ್ಚಿಗೆ ಅಂಟಿ ಕುಳಿತಿರುವುದೇಕೆ’ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದರು.
ಲೋಕಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕಾಪ್ರಹಾರ ನಡೆಸಿದರು. ‘ನಾಯಕತ್ವ ಎಂದರೆ ಕೇವಲ ಕ್ರೆಡಿಟ್ ತೆಗೆದುಕೊಳ್ಳುವುದು ಅಲ್ಲ, ಹೊಣೆ ಹೊತ್ತುಕೊಳ್ಳಬೇಕು’ ಎಂದು ಛೇಡಿಸಿದರು.
‘ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಗೆ ತಾವು ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೆ ನೀಡಿದ್ದಾರೆ. ನಮ್ಮ ದೇಶದಲ್ಲಿ ಮೊದಲ ಬಾರಿಗೆ ಯುದ್ಧವನ್ನು ಹಠಾತ್ ನಿಲ್ಲಿಸಲಾಯಿತು. ಇದು ಮೋದಿ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಏಕಾಏಕಿ ನಿಲ್ಲಿಸಿದ್ದು ಏಕೆ’ ಎಂದು ಅವರು ಪ್ರಶ್ನಿಸಿದರು.
ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ 25 ಮಂದಿಯ ಹೆಸರನ್ನು ಅವರು ಓದಿ ‘ಅವರೆಲ್ಲ ಭಾರತೀಯರು’ ಎಂದರು. ಕಾಂಗ್ರೆಸ್ ಸಂಸದರು ಸಹ ‘ಭಾರತೀಯರು’ ಎಂದು ಹೇಳಿದರು. ಆಗ ಬಿಜೆಪಿ ಸಂಸದರು ‘ಹಿಂದೂ’ ಎಂದು ಕೂಗಿದರು.
‘ಪಹಲ್ಗಾಮ್‌ನಲ್ಲಿ ಆ ದಿನ 26 ಜನರು ತಮ್ಮ ಕುಟುಂಬ ಸದಸ್ಯರ ಎದುರೇ ಕೊಲ್ಲಲ್ಪಟ್ಟರು. ಆ ದಿನ ಬೈಸರನ್ ಕಣಿವೆಯಲ್ಲಿದ್ದ ಯಾರಿಗೂ ಯಾವುದೇ ಭದ್ರತೆ ವ್ಯವಸ್ಥೆ ಇರಲಿಲ್ಲ. ನೀವು ಎಷ್ಟೇ ಕಾರ್ಯಾಚರಣೆಗಳನ್ನು ನಡೆಸಿದರೂ ಸತ್ಯದ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
‘ಸಾವಿರಾರು ಪ್ರವಾಸಿಗರು ಬೈಸರನ್ ಕಣಿವೆಗೆ ಹೋಗುತ್ತಾರೆಂದು ಸರ್ಕಾರಕ್ಕೆ ತಿಳಿದಿರಲಿಲ್ಲವೇ, ಅಲ್ಲಿ ಏಕೆ ಭದ್ರತೆ ಇರಲಿಲ್ಲ? ಇಂತಹ ಭೀಕರ ಭಯೋತ್ಪಾದಕ ದಾಳಿ ನಡೆಯಲಿದೆ ಮತ್ತು ಪಾಕಿಸ್ತಾನದಲ್ಲಿ ಸಂಚು ರೂಪಿಸಲಾಗುತ್ತಿದೆ ಎಂಬುದು ಯಾವುದೇ ಸರ್ಕಾರಿ ಸಂಸ್ಥೆಗೆ ತಿಳಿದಿರಲಿಲ್ಲವೇ? ಇದು ನಮ್ಮ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳ ದೊಡ್ಡ ವೈಫಲ್ಯ. ಇದಕ್ಕೆ ಯಾರು ಹೊಣೆ ಹೊರುತ್ತಾರೆ? ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ’ ಎಂದು ಅವರು ಪ್ರಶ್ನಿಸಿದರು.
‘ನೀವು ಇತಿಹಾಸದ ಬಗ್ಗೆ ಮಾತನಾಡುತ್ತೀರಿ. ನಾನು ವರ್ತಮಾನದ ಬಗ್ಗೆ ಮಾತನಾಡಲು ಬಯಸುತ್ತೇನೆ. ಕಳೆದ 11 ವರ್ಷಗಳ ಹೊಣೆಯನ್ನು ನೀವು ಹೊತ್ತುಕೊಳ್ಳಬೇಕು’ ಎಂದರು. 2005 ಮತ್ತು 2011ರ ಅವಧಿಯಲ್ಲಿ 27 ಭಯೋತ್ಪಾದಕ ದಾಳಿಗಳು ನಡೆದಿವೆ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘2020 ಮತ್ತು 2025ರ ನಡುವೆ ಕಾಶ್ಮೀರದಲ್ಲಿ 25 ಭಯೋತ್ಪಾದಕ ದಾಳಿಗಳು ನಡೆದಿವೆ’ ಎಂದು ತಿರುಗೇಟು ನೀಡಿದರು.
ಸರ್ಕಾರ ಹೊಣೆ ಹೊರಲಿ: ಅಖಿಲೇಶ್ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ‘ಗುಪ್ತಚರ ವೈಫಲ್ಯದ ಹೊಣೆಯನ್ನು ಕೇಂದ್ರ ಸರ್ಕಾರ ಹೊರಬೇಕೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಹಿಸಿದರು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಪಹಲ್ಗಾಮ್ ದಾಳಿಯ ನಂತರ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿರುವುದು ಸರ್ಕಾರದ ವೈಫಲ್ಯದ ಸಂಕೇತ’ ಎಂದರು. ‘ಭಾರತದ ವಿದೇಶಾಂಗ ನೀತಿ ಸಂಪೂರ್ಣವಾಗಿ ಕುಸಿದಿದೆ. ಪ್ರಮುಖ ವಿಷಯಗಳಲ್ಲಿ ಜಾಗತಿಕವಾಗಿ ಭಾರತವು ಏಕಾಂಗಿಯಾಗಿದೆ. ಇನ್ನೊಂದೆಡೆ ಚೀನಾವು ನಮ್ಮ ಭೂಮಿ ಮತ್ತು ಮಾರುಕಟ್ಟೆಯನ್ನು ಕಬಳಿಸುತ್ತಿದೆ. ಚೀನಾ ಹೆಚ್ಚು ಆಕ್ರಮಣಕಾರಿಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.