ADVERTISEMENT

ಹೊಸ ವರ್ಷದಲ್ಲಿ ಲಸಿಕೆ: ಅಣಕು ಕಾರ್ಯಾಚರಣೆಗೆ ಆರೋಗ್ಯ ಸಚಿವಾಲಯ ಸೂಚನೆ

ಪಿಟಿಐ
Published 31 ಡಿಸೆಂಬರ್ 2020, 19:37 IST
Last Updated 31 ಡಿಸೆಂಬರ್ 2020, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಹೊಸ ವರ್ಷದಲ್ಲಿ ಭಾರತಕ್ಕೆ ಕೋವಿಡ್‌–19 ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ’ ಎಂದು ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ವಿ.ಜಿ. ಸೊಮಾನಿ ಅವರು ಗುರುವಾರ ಸುಳಿವು ನೀಡಿದರು.

‘... ಬಹುಶಃ ಸದ್ಯದಲ್ಲೇ ಅಮೂಲ್ಯ ವಸ್ತುವೊಂದು ನಮ್ಮ ಕೈಸೇರಿ, ಹೊಸ ವರ್ಷವು ಅತ್ಯಂತ ಸಂತೋಷದಾಯಕವಾಗಲಿದೆ. ಇಷ್ಟು ಸುಳಿವನ್ನು ಮಾತ್ರ ನಾನು ನೀಡಬಲ್ಲೆ’ ಎಂದು ವೆಬಿನಾರ್‌ ಒಂದರಲ್ಲಿ ಮಾತನಾಡುತ್ತಾ ಅವರು ತಿಳಿಸಿದರು.

ತಾವು ತಯಾರಿಸಿದ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ, ಭಾರತ್‌ ಬಯೊಟೆಕ್‌ ಹಾಗೂ ಫೈಜರ್‌ ಸಂಸ್ಥೆಗಳು ಇತ್ತೀಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ತಜ್ಞರ ಸಮಿತಿಯು ಬುಧವಾರ ಸಭೆ ಸೇರಿತ್ತಾದರೂ, ಜನವರಿ 1ರಂದು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿತ್ತು.

ADVERTISEMENT

ಅಣಕು ಕಾರ್ಯಾಚರಣೆ: ಜನವರಿ 2ರಂದು ಕೋವಿಡ್‌ ಲಸಿಕಾ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರದ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಿಸಲು ಸರ್ಕಾರವು ಸಿದ್ಧತೆ ಮಾಡುತ್ತಿದೆ. ಈ ಕಾರ್ಯಕ್ರಮ ಜಾರಿಯ ಸಿದ್ಧತೆ ಪರಿಶೀಲನೆಗಾಗಿ ಗುರುವಾರ ನಡೆದ ಸಭೆಯಲ್ಲಿ, ಪ್ರತಿ ರಾಜ್ಯದ ರಾಜಧಾನಿಯಲ್ಲಿ ಅಣಕು ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಯಿತು.

ಪ್ರತಿ ರಾಜ್ಯವು ಮೂರು ಕೇಂದ್ರಗಳಲ್ಲಿ ಅಣಕು ಕ್ಯಾಂಪ್‌ ನಡೆಸಬೇಕು. ಪ್ರತಿ ಕೇಂದ್ರದಲ್ಲಿ 25 ಕಾರ್ಯಕರ್ತರಿಗೆ ಡೋಸ್‌ಗಳನ್ನು ನೀಡಲಾಗುವುದು. ಇಂಥ ಕಾರ್ಯಕರ್ತರ ದತ್ತಾಂಶಗಳನ್ನು ‘ಕೋ–ವಿನ್‌’ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಸೂಚನೆ ನೀಡಿದೆ.

ಲಸಿಕೆಗೆ ಡಿಸಿಜಿಐ ಅನುಮತಿ ಲಭಿಸುತ್ತಿದ್ದಂತೆಯೇ ದೇಶದ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಎರಡು ಕೋಟಿ ಸಿಬ್ಬಂದಿ ಹಾಗೂ ಹೆಚ್ಚು ಅಪಾಯಕ್ಕೆ ಒಳಗಾಗಬಹುದಾದ 27 ಕೋಟಿ ನಾಗರಿಕರಿಗೆ ಅವುಗಳನ್ನು ನೀಡಲು ಸಚಿವಾಲಯ ಉದ್ದೇಶಿಸಿದೆ.

ಎಚ್ಚರ ಇರಲಿ: ನರೇಂದ್ರ ಮೋದಿ
‘ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಜನರು ಎಚ್ಚರದಿಂದ ಇರಬೇಕು. ಲಸಿಕೆ ಪಡೆದ ಬಳಿಕವೂ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ಶಂಕುಸ್ಥಾಪನೆ ನೆರವೇರಿಸಿದ ಅವರು, ‘ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ದೇಶ ಸಜ್ಜಾಗಿದೆ. ಲಸಿಕೆ ಬರುವವರೆಗೂ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದು ನಾನು ಹೇಳುತ್ತಿದ್ದೆ. ಇದೀಗ, 2021ರಲ್ಲಿ ‘ಲಸಿಕೆ ಜೊತೆಗೆ ಎಚ್ಚರಿಕೆಯೂ ಅಗತ್ಯ’ ಎಂಬುದು ನಮ್ಮ ಮಂತ್ರವಾಗಬೇಕು’ ಎಂದರು.

‘ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ. ಪ್ರತಿ ಫಲಾನುಭವಿಗೂ ಲಸಿಕೆ ತಲುಪಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸೋಂಕಿನ ಕಾರಣ 2020ರಲ್ಲಿ ನಿರಾಶೆ ಹಾಗೂ ಗಾಬರಿಯ ವಾತಾವರಣವಿತ್ತು. ಈಗ ಚಿಕಿತ್ಸೆಯ ಭರವಸೆಯೊಂದಿಗೆ 2021 ನಮ್ಮ ಮುಂದಿದೆ’ ಎಂದು ಮೋದಿ ಹೇಳಿದರು.

60 ಸಾವಿರ ಮಂದಿಗೆ ತರಬೇತಿ
ಲಸಿಕಾ ಕಾರ್ಯಕ್ರಮಕ್ಕಾಗಿ ಈಗಾಗಲೇ 60,000 ವ್ಯಾಕ್ಸಿನೇಟರ್‌ಗಳಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ 2,360 ಮಂದಿ ರಾಷ್ಟ್ರಮಟ್ಟದಲ್ಲಿ ತರಬೇತಿ ಪಡೆದಿದ್ದಾರೆ.

ಚುಚ್ಚುಮದ್ದು ನೀಡುವ ಸುಮಾರು 57,000 ಮಂದಿಗೆ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಒಟ್ಟಾರೆ 96,000 ಮಂದಿಗೆ ಲಸಿಕಾ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.