ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ತನ್ನ ಕಕ್ಷಿದಾರನ ಪರ ವಕಾಲತ್ತು ವಹಿಸಿಕೊಂಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯವು ಇಬ್ಬರು ವಕೀಲರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್, ಈ ಕುರಿತ ವಿಚಾರಣೆಯನ್ನು ಪೂರ್ಣಗೊಳಿಸಿದ್ದು ಆದೇಶವನ್ನು ಮಂಗಳವಾರ ಕಾಯ್ದಿರಿಸಿತು.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ‘ನಾವು ಈ ದೇಶದ ಎಲ್ಲ ನಾಗರಿಕರ ‘ರಕ್ಷಕ’ರಾಗಿದ್ದೇವೆ’ ಎಂದಿತು.
‘ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ತಮ್ಮ ವೃತ್ತಿಪರ ಕಾರ್ಯಗಳಿಂದ ಹೊರತಾಗಿ, ಅಪರಾಧ ಎಸಗಲು ಅನುಕೂಲವಾಗುವಂಥ ಸಲಹೆಗಳನ್ನು ನೀಡುವುದು, ಸಾಕ್ಷ್ಯ ನಾಶಕ್ಕೆ ಮಾರ್ಗದರ್ಶನ ನೀಡುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ವಕೀಲರಾಗಿರುವವರಿಗೆ ಸಹಜವಾಗಿಯೇ ಇರುವ ರಕ್ಷಣೆಯನ್ನು ತೆಗೆದು ಹಾಕಬೇಕಾಗುತ್ತದೆ’ ಎಂದು ಪೀಠ ಹೇಳಿತು.
‘ವೃತ್ತಿಪರ ಸಲಹೆಗಳನ್ನು, ಅಭಿಪ್ರಾಯಗಳನ್ನು ನೀಡಿದ್ದಕ್ಕಾಗಿ ತನಿಖಾ ಸಂಸ್ಥೆಗಳು ವಕೀಲರನ್ನು ವಿಚಾರಣೆಗೆ ಹಾಜರಾಗುವಂತೆ ಕರೆಯಬಾರದು’ ಎಂದು ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ‘ಅಪರಾಧಗಳಲ್ಲಿ ತಮ್ಮ ಕಕ್ಷಿದಾರನಿಗೆ ಸಹಕಾರ ನೀಡಿದರೆ, ಅಂಥವರಿಗೆ ಸಮನ್ಸ್ ನೀಡಲೇಬೇಕಾಗುತ್ತದೆ’ ಎಂದು ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.