ADVERTISEMENT

ಮೋದಿ, ಯೋಗಿ ಪರ ಘೋಷಣೆ ಕೂಗುವಂತೆ ಮಕ್ಕಳಿಗೆ ಶಿಕ್ಷಕರ ಸೂಚನೆ!: ತನಿಖೆಗೆ ಆದೇಶ

ಐಎಎನ್ಎಸ್
Published 28 ಜನವರಿ 2022, 6:25 IST
Last Updated 28 ಜನವರಿ 2022, 6:25 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ  (ಪಿಟಿಐ ಚಿತ್ರ)
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ಸಿದ್ಧಾರ್ಥನಗರ (ಉತ್ತರ ಪ್ರದೇಶ):ಗಣರಾಜ್ಯೋತ್ಸವ ದಿನದಂದುಇಲ್ಲಿನ ಶಾಲೆಯೊಂದರ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಶ್ಲಾಘಿಸಿ ಘೋಷಣೆ ಕೂಗಿದ್ದರು. ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಘೋಷಣೆ ಕೂಗುವಂತೆ ಮಕ್ಕಳಿಗೆ ಸೂಚಿಸಿದ್ದಾರೆ ಎಂಬ ಆರೋಪಕೇಳಿಬಂದಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ಜಿಲ್ಲೆಯ ಸೊಹ್ರಾತ್‌ಗಡದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದ ವೇಳೆ ಮಕ್ಕಳು ಘೋಷಣೆಗಳನ್ನು ಕೂಗಿದ್ದರು. ಈ ಸಂದರ್ಭದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಕ್ಕಳು ರಾಷ್ಟ್ರಗೀತೆ ಹಾಡಿದ ನಂತರ, ಶಿಕ್ಷಕರ ಸೂಚನೆ ಮೇರೆಗೆ ಪ್ರಧಾನಿ ಮೋದಿ, ಸಿಎಂ ಯೋಗಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಕೂಗಿರುವುದು ವಿಡಿಯೊದಲ್ಲಿದೆ.

ADVERTISEMENT

ಸದ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ಉತ್ತರ ಪ್ರದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪಿಎಂ, ಸಿಎಂ ಪರ ಘೋಷಣೆ ಕೂಗಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

ʼಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್‌ ಆದ ಬಳಿಕ ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಪ್ರಕರಣದ ತನಿಖೆ ನಡೆಸುವಂತೆಪ್ರಾಥಮಿಕಶಿಕ್ಷಣ ಅಧಿಕಾರಿಗೆ (ಬಿಎಸ್‌ಎ) ಸೂಚಿಸಿದ್ದೇವೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದುʼ ಎಂದು ಜಿಲ್ಲಾಧಿಕಾರಿ ದೀಪಕ್‌ ಮೀನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.