ADVERTISEMENT

ಸುಯೆಜ್‌ ಕಾಲುವೆಯಲ್ಲಿ ಹಡಗು ಸಿಲುಕಿದ್ದು ಹೇಗೆ? ತನಿಖೆ ಆರಂಭ

ಪಿಟಿಐ
Published 30 ಮಾರ್ಚ್ 2021, 9:36 IST
Last Updated 30 ಮಾರ್ಚ್ 2021, 9:36 IST
ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗನ್ನು ತೆರವುಗೊಳಿಸಿರುವುದು
ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗನ್ನು ತೆರವುಗೊಳಿಸಿರುವುದು   

ಸುಯೆಜ್ (ಈಜಿಪ್ಟ್): ವಾರದ ಬಳಿಕ ಸುಯೆಜ್‌ ಕಾಲುವೆ ಸಂಚಾರಕ್ಕೆ ಮುಕ್ತವಾಗಿದೆ. ಇಲ್ಲಿ ಸಿಲುಕಿದ್ದ ಎವರ್‌ಗಿವನ್‌ ಬೃಹತ್‌ ಕಂಟೇನರ್‌ಗಳ ಹಡಗನ್ನು ಸೋಮವಾರ ತೆರವುಗೊಳಿಸಲಾಗಿದೆ. ಈ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡ ಕುರಿತು ವಿವಿಧ ತಜ್ಞರು ತನಿಖೆ ನಡೆಸಲಿದ್ದಾರೆ ಎಂದು ಹಡಗಿನ ಮಾಲೀಕ ಸಂಸ್ಥೆ ಶೋಯ ಕಿಸೆನ್‌ ಹೇಳಿದೆ.

ಹಡಗು ಬದಿಗೆ ಸರಿಯಲು ಉಂಟಾದ ಕಾರಣಗಳ ಬಗ್ಗೆ ಚರ್ಚಿಸಲು ನಿರಾಕರಿಸಿದ ಸಂಸ್ಥೆಯ ಪ್ರತಿನಿಧಿ, ಹಡಗಿನ ವೇಗ ಮತ್ತು ಇತರ ದೋಷಗಳು ಸೇರಿದಂತೆ ನಡೆಯುತ್ತಿರುವ ತನಿಖೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಹಡಗಿನ ಕೆಳಭಾಗದಲ್ಲಿ ಹೆಚ್ಚಿನ ಹಾನಿ ಆಗಿರಬಹುದು ಎಂದು ಕಂಪನಿ ತಿಳಿಸಿದೆ. ಈಜಿಪ್ಟ್‌ ಅಥವಾ ಬೇರೆ ಬಂದರಿನಲ್ಲಿ ಈ ಹಡಗನ್ನು ರಿಪೇರಿ ಮಾಡಿಸಲಾಗುತ್ತದೆಯಾ ಅಥವಾ ಅದರ ಗಮ್ಯಕ್ಕೆ ಹೋಗುತ್ತದೆಯಾ ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಇದನ್ನು ಹಡಗಿನ ಮಾಲೀಕರಿಗಿಂತ ಅದರ ನಾವಿಕರು ನಿರ್ಧರಿಸುತ್ತಾರೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಜ್ಞರು ಸಂಭವನೀಯ ಹಾನಿಯ ಕುರಿತು ಕುರುಹುಗಳನ್ನೂ ಹುಡುಕುತ್ತಿದ್ದಾರೆ ಮತ್ತು ಕಾಲುವೆಯಲ್ಲಿ ಹಡಗು ಸಿಲುಕಲು ನಿಖರ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚುವಲ್ಲಿ ತೊಡಗಿದ್ದಾರೆ ಎಂದು ಹೆಸರು ಹೇಳಲು ಬಯಸದ ಹಿರಿಯ ನಾವಿಕರೊಬ್ಬರು ಮಾಹಿತಿ ನೀಡಿದರು.

ಎಂಜಿನಿಯರ್‌ಗಳು ಹಡಗಿನ ಎಂಜಿನ್‌ಗಳನ್ನು ಪರೀಕ್ಷಿಸುತ್ತಿದ್ದಾರೆ. ಅದು ತನ್ನ ಗಮ್ಯ ಸ್ಥಾನವಾದ ನೆದರ್‌ಲೆಂಡ್ಸ್‌ಗೆ ಯಾವಾಗ ತಲುಪಬಹುದು ಎಂಬುದನ್ನು ಅಂದಾಜು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸುಯೆಜ್ ಕಾಲುವೆಯಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯಿಂದಾಗಿ ಎರಡೂ ಬದಿಯಲ್ಲಿ 367 ಹಡಗುಗಳು ಕಾಯುತ್ತಿದ್ದವು. ಇದೀಗ ಅವುಗಳ ಸಂಚಾರ ಆರಂಭವಾಗಿದ್ದು, ಎಲ್ಲ ಹಡಗುಗಳು ಇಲ್ಲಿಂದ ತೆರವುಗೊಳ್ಳಲು ಕನಿಷ್ಠ 10 ದಿನಗಳಾದರೂ ಬೇಕಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.