ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ನಂದಿಗ್ರಾಮದಲ್ಲಿ ತೀವ್ರ ಕಟ್ಟೆಚ್ಚರ, ನಿಷೇಧಾಜ್ಞೆ ಜಾರಿ

ಏಜೆನ್ಸೀಸ್
Published 31 ಮಾರ್ಚ್ 2021, 10:25 IST
Last Updated 31 ಮಾರ್ಚ್ 2021, 10:25 IST
ನಂದಿಗ್ರಾಮದಲ್ಲಿ ಪ್ರಚಾರ ಕಾರ್ಯ ಕೈಗೊಂಡ ಮಮತಾ ಬ್ಯಾನರ್ಜಿ
ನಂದಿಗ್ರಾಮದಲ್ಲಿ ಪ್ರಚಾರ ಕಾರ್ಯ ಕೈಗೊಂಡ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಗುರುವಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಈ ಸಂಬಂಧ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, 'ಚುನಾವಣಾ ಆಯೋಗವು ಹೆಲಿಕಾಪ್ಟರ್ ಸಹಾಯದಿಂದ ನಂದಿಗ್ರಾಮ ಕ್ಷೇತ್ರವ್ಯಾಪ್ತಿಯಲ್ಲಿ ವಾಯು ಕಣ್ಗಾವಲು ಕಾರ್ಯವನ್ನು ಪ್ರಾರಂಭಿಸಿದೆ' ಎಂದು ತಿಳಿಸಿದ್ದಾರೆ.

ನಂದಿಗ್ರಾಮದ ಮತದಾರರಲ್ಲದ ಜನರು ಕ್ಷೇತ್ರದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಶುಕ್ರವಾರದ ಮಧ್ಯರಾತ್ರಿಯವರೆಗೂ ನಿಷೇಧಾಜ್ಞೆ ಜಾರಿ ಇರಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ADVERTISEMENT


‘ನಂದಿಗ್ರಾಮವನ್ನು ಪ್ರವೇಶಿಸಿರುವ ಇತರೆ ರಾಜ್ಯಗಳ ಗೂಂಡಾಗಳು, ಇಲ್ಲಿನ ಮತದಾರರನ್ನು ಬೆದರಿಸಿ, ತೊಂದರೆ ಕೊಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಕಳೆದ ಡಿಸೆಂಬರ್‌ನ್‌ಲ್ಲಿ ಟಿಎಂಸಿ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ಸುವೇಂದು, ತವರು ಕ್ಷೇತ್ರ ನಂದಿಗ್ರಾಮದಲ್ಲಿ ತನ್ನೆದುರು ಸ್ಪರ್ಧಿಸಿ ಗೆಲ್ಲುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದರು. ಸವಾಲನ್ನು ಸ್ವೀಕರಿಸಿದ್ದ ಮಮತಾ ಅವರು ಮಾರ್ಚ್‌ 10ರಂದುಇದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

2016ರ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಟಿಎಂಸಿ ಪಕ್ಷದಿಂದ ಆಯ್ಕೆಯಾಗಿದ್ದರು. ಆಗ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐ ಅಭ್ಯರ್ಥಿ ವಿರುದ್ಧ 81,230 ಮತಗಳ ಅಂತರದಿಂದ ಜಯಗಳಿಸಿದ್ದರು. ಆಗ ಶೇ 67ರಷ್ಟು ಮತಗಳನ್ನು ಪಡೆದಿದ್ದರು. ಎಡ ಪಕ್ಷಗಳ ಮೈತ್ರಿಕೂಟ ಇಲ್ಲಿ ಸಿಪಿಎಂ ಯುವ ನಾಯಕರಾದ ಮೀನಾಕ್ಷಿ ಮುಖರ್ಜಿ ಅವರನ್ನು ಕಣಕ್ಕೆ ಇಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.