ADVERTISEMENT

‘ಉಚಿತ ವಿದ್ಯುತ್‌’ ಭರವಸೆ: ಅಪರಾಧ ಎಂದು ಪರಿಗಣಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 2:17 IST
Last Updated 29 ಅಕ್ಟೋಬರ್ 2022, 2:17 IST

ನವದೆಹಲಿ: ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಉಚಿತ ವಿದ್ಯುತ್‌ ನೀಡುತ್ತೇವೆ ಎಂದು ಭರವಸೆ ನೀಡಿದರೆ, ಅಂಥ ಭರವಸೆಗಳನ್ನು ಅಸಿಂಧುಗೊಳಿಸಬೇಕು ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್‌ ಕುಮಾರ್ ಅವರ ‘ಪೆಹಲೆ ಇಂಡಿಯಾ ಫೌಂಡೇಷನ್‌’ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಜನರ ಪ್ರಾತಿನಿಧಿಕ ಕಾಯ್ದೆ ಅನ್ವಯ ಇಂಥ ಭರವಸೆಗಳನ್ನು ಅಪರಾಧ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದೆ.

ಹೀಗೆ ನೀಡುವ ‘ಉಚಿತ’ ಭರವಸೆಗಳು ಮತದಾರರಿಗೆ ಲಾಭ ಮಾಡಿಕೊಡುತ್ತದೆ ಎನ್ನುವುದು ತಪ್ಪು ಕಲ್ಪನೆ ಮತ್ತು ಜನರನ್ನು ಹಾದಿತಪ್ಪಿಸುವ ಕೆಲಸ ಎಂದು ಸಂಸ್ಥೆ ತನ್ನ ಅರ್ಜಿಯಲ್ಲಿ ಹೇಳಿದೆ.

‘ಇಂಥ ಭರವಸೆಗಳು ಯಾವುದೇ ರಾಜ್ಯದ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಚುನಾವಣಾ ಆಯೋಗದ ಒಪ್ಪಿಗೆ ಬಳಿಕವೇ ಯಾವುದೇ ರಾಜಕೀಯ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಂತೆ ಶಾಶ್ವತ ನಿಯಮವೊಂದನ್ನು ರೂಪಿಸಬೇಕು’ ಎಂದು ಮನವಿ ಮಾಡಿದೆ.

ADVERTISEMENT

‘ಅಗತ್ಯ ಸೇವೆಗಳಿಗಾಗಿ ರಾಜ್ಯವೊಂದು ವ್ಯಯಿಸಬೇಕಿರುವ ಹಣವನ್ನು ಈ ರೀತಿಯ ‘ಉಚಿತ’ ಭರವಸೆಗಳಿಗಾಗಿ ಖರ್ಚು ಮಾಡುವಂತಾಗುತ್ತದೆ. ವಿದ್ಯುತ್‌ ಕ್ಷೇತ್ರಕ್ಕೆ ಈಗಾಗಲೇ ₹ 5 ಲಕ್ಷ ಕೋಟಿ ನೆರವನ್ನು ನೀಡಲಾಗುತ್ತಿದೆ. ಈ ಹಣವು ಕೇಂದ್ರ ಸರ್ಕಾರವು ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ವ್ಯಯಿಸುವ ಹಣಕ್ಕಿಂತ ಹೆಚ್ಚಿದೆ’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.