ADVERTISEMENT

ರೈತರ ಭರವಸೆ ಈಡೇರಿಸದ ಸರ್ಕಾರ: ಸತ್ಯಪಾಲ್ ಮಲಿಕ್ ಟೀಕೆ

ಎಂಎಸ್‌ಪಿ ಬಗ್ಗೆ ಸೂಕ್ತ ಕಾನೂನು ರೂಪಿಸಲು ಒತ್ತಾಯ

ಪಿಟಿಐ
Published 9 ಮೇ 2022, 11:30 IST
Last Updated 9 ಮೇ 2022, 11:30 IST
ಸತ್ಯಪಾಲ್ ಮಲಿಕ್
ಸತ್ಯಪಾಲ್ ಮಲಿಕ್   

ಮುಜಾಫ್ಘರ್‌ ನಗರ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರತಿಭಟನನಿರತ ರೈತರಿಗೆ ನೀಡಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರವು ಇದುವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿರುವ ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಸಂಬಂಧಿಸಿದಂತೆ ಕಾನೂನನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಿರುವ ಪರಿಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸತ್ಯಪಾಲ್, ದೆಹಲಿಯ ಗಡಿಗಳಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿರಬಹುದು. ಆದರೆ, ಕೃಷಿಗೆ ಸಂಬಂಧಿಸಿದಂತೆ ಮೂರು ವಿವಾದಾತ್ಮಕ ಕಾಯ್ದೆಗಳ ಕುರಿತ ಅವರ ಪ್ರತಿಭಟನೆ ಬೇರೆ ಕಡೆ ಇನ್ನೂ ಜೀವಂತವಾಗಿದೆ ಎಂದರು.

ಬಾಘ್ರಾ ದರ್ಗಾಕ್ಕೆ ಭೇಟಿ ನೀಡಿ, ರಾಷ್ಟ್ರೀಯ ಲೋಕದಳ ಮತ್ತು ಸಮಾಜವಾದಿ ಪಕ್ಷದ ನಾಯಕರನ್ನು ಭೇಟಿ ಮಾಡಿದ ಬಳಿಕ ಸತ್ಯಪಾಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶದಲ್ಲಿನ ಹಣದುಬ್ಬರ ಮತ್ತು ನಿರುದ್ಯೋಗದಂಥ ಪ್ರಮುಖ ವಿಷಯಗಳನ್ನು ಚರ್ಚಿಸುವ ಬದಲು ಅಪ್ರಸ್ತುತ ವಿಷಯಗಳನ್ನು ಚರ್ಚಿಸಲಾಗುತ್ತಿದೆ’ ಎಂದೂ ವಿಷಾದಿಸಿದ್ದಾರೆ.

ADVERTISEMENT

ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಬಳಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಸಮಯಾವಕಾಶ ನೀಡದೇ ಬಡವರ ಮನೆಗಳನ್ನು ನೆಲಸಮ ಮಾಡಬಾರದು’ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ರೈತರ ಪ್ರತಿಭಟನೆಯು ಉತ್ತುಂಗದಲ್ಲಿದ್ದಾಗ ಮಲಿಕ್ ರೈತರ ಪರವಾಗಿ ಮಾತನಾಡಿ, ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದರು.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಮಲಿಕ್ ಅವರಿಗೆ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಬೇಡಿ. ಟೀಕಿಸಿದರೆ ಪಕ್ಷದ ಸ್ಥಾನಮಾನಗಳಿಂದ ವಂಚಿತರಾಗುತ್ತೀರಿ ಎಂದು ಅವರ ಸ್ನೇಹಿತರು ಸಲಹೆ ನೀಡಿದ್ದರು. ಆದರೆ, ‘ನನಗೆ ಯಾವುದೇ ಸ್ಥಾನಗಳ ಬಗ್ಗೆ ಕಾಳಜಿ ಇಲ್ಲ’ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.