ಭೈಯ್ಯಾಜಿ ಜೋಶಿ
ನಾಗ್ಪುರ: ಗೋವುಗಳ ರಕ್ಷಣೆ ಧರ್ಮಾತೀತವಾಗಿ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ನಾಯಕ ಸುರೇಶ್ ಭಯ್ಯಾಜಿ ಜೋಶಿ ಬುಧವಾರ ಹೇಳಿದರು.
‘ಗೋರಕ್ಷಣಾ ಸಭಾ’ ಎಂಬ ನೂತನ ಯೋಜನೆಯ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಹಿಂದೂ ಸಮುದಾಯವು ಗೋವುಗಳ ಬಗ್ಗೆ ಅಸಡ್ಡೆ ತೋರಿತ್ತು. 1888ರಲ್ಲಿ ಕೆಲವರು ಸೇರಿ ಗೋರಕ್ಷಣಾ ಸಭಾ ಮೂಲಕ ಗೋವುಗಳ ರಕ್ಷಣೆಗೆ ಮುಂದಾದರು. ಭಾರತದಲ್ಲಿಯೂ ಗೋ ರಕ್ಷಣೆಗೆ ಮುಂದಾಗಬೇಕಿರುವುದು ವಿಷಾದನೀಯ ಎಂದು ಹೇಳಿದರು.
ಗೋಮಾತೆ ತುಂಬಾ ಸೂಕ್ಷ್ಮ ಜೀವಿ. ಯಾವ ಕಾರ್ಖಾನೆಯೂ ತರಕಾರಿ, ಕಾಳುಗಳು ಮತ್ತು ಹಣ್ಣುಗಳನ್ನು ಉತ್ಪಾದನೆ ಮಾಡುವುದಿಲ್ಲ. ರಾಸಾಯನಿಕಯುಕ್ತ ಗೊಬ್ಬರ ಭೂಮಿಗೆ ಪೋಷಕಾಂಶವನ್ನು ನೀಡುವುದಿಲ್ಲ ಎಂದು ವಿಜ್ಞಾನ ಮತ್ತು ಸಾವಿರಾರು ವರ್ಷಗಳ ಜ್ಞಾನ ಒತ್ತಿ ಹೇಳಿದೆ. ಆದರೆ, ರಾಸಾಯನಿಕಗಳ ಬಳಕೆ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಗೋವು ಮಾತ್ರ ನಮ್ಮನ್ನು ಈ ಸಂಕಷ್ಟದಿಂದ ಪಾರುಮಾಡಬಲ್ಲದು. ಇದನ್ನು ಪ್ರತಿಯೊಂದು ಧರ್ಮ ಮತ್ತು ದೇಶದ ಜನರು ಅರ್ಥ ಮಾಡಿಕೊಳ್ಳಬೇಕು. ಭಾರತೀಯರು ಈಗಲಾದರೂ ಗೋ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.