ಲಖನೌ, ಉತ್ತರಪ್ರದೇಶ: ಇಲ್ಲಿನ ಮಥುರಾ ಜಿಲ್ಲೆಯ ವೃಂದಾವನದಲ್ಲಿ ‘ಬಾಂಕೆ ಬಿಹಾರಿ’ ದೇವಾಲಯ ಕಾರಿಡಾರ್ ನಿರ್ಮಾಣ ಖಂಡಿಸಿ ನೂರಾರು ವ್ಯಾಪಾರಿಗಳು ಹಾಗೂ ಅರ್ಚಕರು ಬೀದಿಗಿಳಿದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಪ್ರತಿಭಟನೆ ನಡೆಸಿದರು.
ದೇವಾಲಯದ ಕಾರಿಡಾರ್ ನಿರ್ಮಾಣ ಕೈಬಿಡಬೇಕು, ವೃಂದಾವನ ಟ್ರಸ್ಟ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿ ಹೇಮಾ ಮಾಲಿನಿ ವಿರುದ್ಧ ಕಿಡಿಕಾರಿದರು.
ಭಗವಾನ್ ಶ್ರೀ ಕೃಷ್ಣನ ಅವಧಿಯಿಂದಲೂ ಇರುವ ‘ಕುಂಜ್ ಗಲಿ’ಗಳನ್ನು ನಾಶಪಡಿಸುವುದಿಲ್ಲ ಎಂದು ರಾಜ್ಯ ಸರ್ಕಾರವು ಲಿಖಿತ ಭರವಸೆ ನೀಡಬೇಕು ಎಂದು ಈ ವೇಳೆ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಮಧು ಶರ್ಮಾ ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಏಕೆ ನಿರ್ಮಾಣ?
ದೇವಾಲಯಕ್ಕೆ ಪ್ರತಿ ವರ್ಷ ಕೋಟ್ಯಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿಗೆ ತೆರಳುವ ಮಾರ್ಗವು ಇಕ್ಕಟ್ಟಾಗಿದ್ದು, ದೇವರ ದರ್ಶನ ಪಡೆಯುವುದು ಕಷ್ಟವಾಗಿದೆ. ಹಲವು ಸಲ ಭಕ್ತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹೀಗಾಗಿ, ಈಗಿನ ಮಾರ್ಗ ವಿಸ್ತರಿಸಿ, ಹೆಚ್ಚಿನ ಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಸ್ಥಳೀಯರಲ್ಲಿ ಒಡಕು: ಮನೆ, ಅಂಗಡಿ ಕಳೆದುಕೊಳ್ಳುವವರು ಆತಂಕದಲ್ಲಿದ್ದರೆ, ಸ್ಥಳೀಯರು ಕಾಮಗಾರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ವೃಂದಾವನದ ಸಾಂಸ್ಕೃತಿಕ ಗುರುತನ್ನು ನಾಶಪಡಿಸಲು ರಾಜ್ಯ ಸರ್ಕಾರ ಹೊರಡಿದೆ. ಇದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್ ಬೆಂಬಲಿಸಲಿದೆ.ಅಜಯ್ ರಾಯ್, ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ
‘ನಾವು ಕಾರಿಡಾರ್ ವಿರೋಧಿಸುತ್ತಿಲ್ಲ. ಆದರೆ ‘ಕುಂಜ್ ಗಲಿ’ಗಳನ್ನು (ಬಳ್ಳಿಗಳಿಂದ ಹರಡಿದ ಓಣಿ ರಸ್ತೆ) ಮುಟ್ಟಬಾರದು. ವೃಂದಾವನದಲ್ಲಿ ಇಂತಹ 150 ಕುಂಜ್ ಗಲಿಗಳಿದ್ದು, ಅವನ್ನು ನಾಶಪಡಿಸಿದರೆ ವೃಂದಾವನದ ಮೂಲ ಸ್ವರೂಪವೇ ಬದಲಾಗಲಿದೆ’ ಎಂದು ಸ್ಥಳೀಯ ನಿವಾಸಿ ಛಯಿಲ್ ಬಿಹಾರಿ ತಿಳಿಸಿದರು.
ಯೋಜನೆಯನ್ನು ವಿರೋಧಿಸಿ ಅರ್ಚಕರು ಹಾಗೂ ಸ್ಥಳೀಯ ಅಂಗಡಿ ಮಾಲೀಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ. ₹500 ಕೋಟಿ ವೆಚ್ಚದಲ್ಲಿ ಜಾರಿಯಾಗಲಿರುವ ಈ ಯೋಜನೆಯಿಂದ ದೇವಾಲಯಕ್ಕೆ ಮೂರು ಭಾಗದಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಿದೆ. ವಾಹನ ನಿಲುಗಡೆ ಪ್ರದೇಶ, ಅಂಗಡಿ ಮಳಿಗೆ, ಇತರೆ ಸೌಕರ್ಯಗಳು ಹೊಂದಲಿದೆ.
ಮೂಲಗಳ ಪ್ರಕಾರ, ಕಾರಿಡಾರ್ ನಿರ್ಮಾಣಗೊಂಡರೆ 200 ಮನೆಗಳು, 100 ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಹೊಸತಾಗಿ ಟ್ರಸ್ಟ್ ರಚನೆಯಾಗಿ, ದೇವಾಲಯವನ್ನು ತನ್ನ ವಶಕ್ಕೆ ಪಡೆಯಲಿದ್ದು, ಪಾರಂಪರಿಕವಾಗಿ ಕೆಲಸ ಮಾಡುತ್ತಿರುವ ಅರ್ಚಕರು ತಮ್ಮ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.