ADVERTISEMENT

ಪ್ರಿಯಾಂಕಾ ವಿರುದ್ಧ ವಯನಾಡ್‌ನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 16:01 IST
Last Updated 28 ಜನವರಿ 2025, 16:01 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ತಿರುವನಂತಪುರ: ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರಿಯಾಂಕಾ ಅವರು ಯಾವಾಗಲೋ ಒಮ್ಮೆ ಮಾತ್ರ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂದು ಸಿಪಿಎಂ ಪ್ರತಿಭಟನೆ ನಡೆಸಿದೆ. ಪ್ರಿಯಾಂಕಾ ಅವರು ಕಣ್ಣೂರು ವಿಮಾನ ನಿಲ್ದಾಣದಿಂದ ವಯನಾಡ್‌ ಕಡೆ ತೆರಳುವಾಗ ಸಿಪಿಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ‍

ಪ್ರಿಯಾಂಕಾ ಅವರು ಹುಲಿ ದಾಳಿಗೆ ಬಲಿಯಾದ ರಾಧಾ ಅವರ ಮನೆಗೆ ಹಾಗೂ ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ಮುಖಂಡ ಎಂ.ಎನ್. ವಿಜಯನ್ ಅವರ ಮನೆಗಳಿಗೆ ಭೇಟಿ ನೀಡಿದರು. ರಾಧಾ ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯ ಒದಗಿಸುವುದಾಗಿ ಪ್ರಿಯಾಂಕಾ ಭರವಸೆ ನೀಡಿದರು.

ವನ್ಯಜೀವಿಗಳಿಂದ ಜನರ ರಕ್ಷಣೆ ಕೇಂದ್ರ– ರಾಜ್ಯಗಳ ಹೊಣೆ :
ವನ್ಯಜೀವಿಗಳಿಂದ ಜನರನ್ನು ರಕ್ಷಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

ಕೇರಳ ಜಿಲ್ಲೆಯಲ್ಲಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಹುಲಿ ದಾಳಿಯಿಂದ ಕಳೆದ ವಾರ ಮೃತಪಟ್ಟ ಮಹಿಳೆಯ ಕುಟುಂಬವನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ವನ್ಯ ಜೀವಿಗಳ ದಾಳಿ ತಡೆಗೆ ಅನುದಾನ ಕೊರತೆ ವಿಷಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಮಾತನಾಡುತ್ತೇನೆ ಎಂದರು.

ವನ್ಯಜೀವಿಗಳಿಂದ ಜನರ ರಕ್ಷಣೆಗೆ ಜಿಲ್ಲಾಡಳಿತವು ಅವಿರತವಾಗಿ ಶ್ರಮಿಸುತ್ತಿದೆ. ಆದರೆ ಈ ವಿಷಯಕ್ಕೆ ಸರ್ಕಾರಗಳು ಸೂಕ್ತ ಪ್ರಾಮುಖ್ಯತೆ ನೀಡದ ಕಾರಣ ಅವರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.