ADVERTISEMENT

ಲೋಕಸಭೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ | ‘ಬಿಜೆಪಿ ಬೇಟೆಯ ರಾಜಕಾರಣ ನಿಲ್ಲಿಸಲಿ’

ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:15 IST
Last Updated 9 ಜುಲೈ 2019, 20:15 IST
ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿ ಹೊರನಡೆದ ಕಾಂಗ್ರೆಸ್‌ ಸಂಸದರು.
ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿ ಹೊರನಡೆದ ಕಾಂಗ್ರೆಸ್‌ ಸಂಸದರು.   

ನವದೆಹಲಿ: ಕರ್ನಾಟಕದ ರಾಜಕೀಯ ಬೆಳವಣಿಗೆಗೆ ಬಿಜೆಪಿಯೇ ಕಾರಣ ಎಂದು ಆರೋಪಿಸಿ ಮಂಗಳವಾರವೂ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸದಸ್ಯರು, ಡಿಎಂಕೆ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.

ಕರ್ನಾಟಕದ ಬೆಳವಣಿಗೆಯ ಕುರಿತು ನಿಯಮಾನುಸಾರ ಸಮಗ್ರ ಚರ್ಚೆಗೆ ಅವಕಾಶ ಕೋರಿ ಶೂನ್ಯವೇಳೆಯಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್‌ ಮತ್ತು ಡಿಎಂಕೆ ಸದಸ್ಯರು, ಸ್ಪೀಕರ್ ಎದುರಿನ ಜಾಗಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಸೋನಿಯಾ ಗಾಂಧಿ ಅವರ ಪಕ್ಕದ ಆಸನದಲ್ಲಿ ಕುಳಿತಿದ್ದ ರಾಹುಲ್‌ ಗಾಂಧಿ ‘ಪ್ರಜಾಪ್ರಭುತ್ವ ರಕ್ಷಿಸಿ’ ಎಂದು ಘೋಷಣೆ ಕೂಗಿ ಇತರ ಸದಸ್ಯರನ್ನು ಹುರಿದುಂಬಿಸಿದರು. ಅವರು ಲೋಕಸಭೆಯಲ್ಲಿ ಘೋಷಣೆ ಕೂಗಿದ್ದು ಇದೇ ಮೊದಲ ಬಾರಿ.

ADVERTISEMENT

‘ಕರ್ನಾಟಕದ ಬೆಳವಣಿಗೆಗಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸೋಮವಾರವೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕಾಂಗ್ರೆಸ್‌ಗೆ ಉತ್ತರ ನೀಡಿದ್ದಾರೆ. ಪ್ರತಿ ನಿತ್ಯ ಒಂದೇ ವಿಷಯ ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಆಡಳಿತ ಪಕ್ಷದ ಪರ ಸ್ಪಷ್ಟನೆ ನೀಡಿದರು.

ಈ ವೇಳೆ ಘೋಷಣೆ ಕೂಗುತ್ತ ಸ್ಪೀಕರ್ ಎದುರಿನ ಜಾಗಕ್ಕೆ ನುಗ್ಗಿದ ಕಾಂಗ್ರೆಸ್‌ ಸದಸ್ಯರನ್ನು ಸಮಾಧಾನಪಡಿಸಿದ ಸ್ಪೀಕರ್‌ ಓಂ ಬಿರ್ಲಾ, ಮಾತನಾಡಲು ಅವಕಾಶ ನೀಡುವುದಾಗಿ ತಿಳಿಸಿದರು. ನಂತರ ಮಾತನಾಡಿದ ಕಾಂಗ್ರೆಸ್‌ ಗುಂಪಿನ ನಾಯಕ ಅಧೀರ್‌ ರಂಜನ್‌ ಚೌಧರಿ, ಬಿಜೆಪಿ ‘ಬೇಟೆಯ ರಾಜಕಾರಣ’ ಮಾಡುತ್ತಿದೆ. ಪ್ರಜಾಪ್ರಭುತ್ವ ಸಂಹರಿಸುವ ಈ ಪ್ರಕ್ರಿಯೆಗೆ ತಡೆ ನೀಡಬೇಕಿದೆ ಎಂದರು.

ಸಚಿವ ಸ್ಥಾನಕ್ಕೆ ರಾಜಭವನದಲ್ಲಿ ರಾಜೀನಾಮೆ ಸಲ್ಲಿಸಿ ಹೊರಬರುವ ಪಕ್ಷೇತರ ಶಾಸಕನನ್ನು ಮುಂಬೈ ಕರೆದುಕೊಂಡು ಹೋಗಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿರುವ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಅವರು ದೂರಿದರು.

ಈ ಸಂದರ್ಭ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತೆ ಸ್ಪಷ್ಟನೆ ನೀಡಲು ಮುಂದಾದಾಗ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.ಕರ್ನಾಟಕದ ಬೆಳವಣಿಗೆಗಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂಬ ಸ್ಪಷ್ಟನೆ ನೀಡಿದ ಬಳಿಕವೂ ಕಾಂಗ್ರೆಸ್‌ ಸದಸ್ಯರು ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪಗಳಿಗೆ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.