ADVERTISEMENT

ವಕ್ಫ್‌ JPC ಸಭೆಯಲ್ಲಿ ಕೋಲಾಹಲ: ವಿರೋಧ ಪಕ್ಷಗಳ 10 ಸಂಸದರ ಅಮಾನತು

​ಪ್ರಜಾವಾಣಿ ವಾರ್ತೆ
ಪಿಟಿಐ
Published 24 ಜನವರಿ 2025, 18:50 IST
Last Updated 24 ಜನವರಿ 2025, 18:50 IST
<div class="paragraphs"><p>ವಕ್ಫ್‌ ಜೆಪಿಸಿ ಸಭೆ</p></div>

ವಕ್ಫ್‌ ಜೆಪಿಸಿ ಸಭೆ

   

ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸದಸ್ಯರಾಗಿರುವ ವಿರೋಧ ಪಕ್ಷಗಳ 10 ಸಂಸದರನ್ನು ಒಂದು ದಿನದ ಮಟ್ಟಿಗೆ ಶುಕ್ರವಾರ ಅಮಾನತು ಮಾಡಲಾಗಿದೆ. ಸಮಿತಿಯ ಮುಖ್ಯಸ್ಥ ಜಗದಂಬಿಕಾ ಪಾಲ್‌ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋ‍ಪಿಸಿ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದರು. 

ಪಾಲ್‌ ಮತ್ತು ಬಿಜೆಪಿ ಸಂಸದರು ವಿರೋಧ ಪಕ್ಷಗಳ ಸಂಸದರನ್ನು ಟೀಕಿಸಿದರು. ‘ಎಲ್ಲ ಮಿತಿಯನ್ನೂ ಮೀರುತ್ತಿದ್ದಾರೆ’ ಮತ್ತು ‘ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಆಕ್ಷೇಪಿಸಿದರು. ಮುಖ್ಯವಾಗಿ, ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅವರ ಮೇಲೆ ಬಿಜೆಪಿ ಸಂಸದರು ಹರಿಹಾಯ್ದರು. ಸಮಿತಿಯ ಕಲಾಪಕ್ಕೆ ಉಂಟು ಮಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. 

ADVERTISEMENT

ಇದಕ್ಕೆ ಪ್ರತಿಯಾಗಿ, ವಿರೋಧ ಪಕ್ಷಗಳ ಸಂಸದರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಮನವಿಪತ್ರ ಸಲ್ಲಿಸಿದ್ದು, ‘ಸಮಿತಿಯ ಕಲಾಪಗಳನ್ನು ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸುವಂತೆ ಜಗದಂಬಿಕಾ ಪಾಲ್‌ ಅವರಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ. 

ವಕ್ಫ್‌ ತಿದ್ದುಪಡಿ ಮಸೂದೆ ಕುರಿತು ಅಹವಾಲು ಸಲ್ಲಿಸುವುದಕ್ಕಾಗಿ ಧಾರ್ಮಿಕ ಮುಖಂಡ ಮೀರ್‌ವೈಜ್‌ ಉಮರ್‌ ಫಾರೂಕ್‌ ನೇತೃತ್ವದ ಜಮ್ಮು–ಕಾಶ್ಮೀರದ ನಿಯೋಗವೊಂದು ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ವೇಳೆಯೇ, ಸಮಿತಿ ಸಭೆಯಲ್ಲಿ ಈ ಗದ್ದಲ ಕಂಡುಬಂತು.

‘ಸಮಿತಿ ಸಭೆಗೆ ಅಡ್ಡಿಪಡಿಸಿದ್ದೇವೆ’ ಎಂಬ ಆರೋಪಗಳನ್ನು ಒಕ್ಕೊರಲಿನಿಂದ ಅಲ್ಲಗಳೆದಿರುವ ವಿಪಕ್ಷಗಳ ಸಂಸದರು, ‘ಶುಕ್ರವಾರದ ಸಭೆಯನ್ನು ಮುಂದೂಡಬೇಕು ಎಂಬ ಮನವಿಯನ್ನು ಸಮಿತಿ ಅಧ್ಯಕ್ಷ ಪಾಲ್‌ ಮಾನ್ಯ ಮಾಡಲಿಲ್ಲ. ಅಲ್ಲದೇ, ಸಭೆಯ ಕಾರ್ಯಸೂಚಿಯನ್ನು ಗುರುವಾರ ರಾತ್ರಿ ನಮಗೆ ತಲುಪಿಸಲಾಗಿತ್ತು’ ಎಂದು ಸ್ಪೀಕರ್‌ ಬಿರ್ಲಾ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಗದ್ದಲ: ಸಭೆ ಆರಂಭವಾದಾಗ, ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸದಸ್ಯರು ಅಧ್ಯಕ್ಷ ಪಾಲ್ ಅವರ ಕಾರ್ಯವೈಖರಿಯನ್ನು ಟೀಕಿಸಿದರು. 

‘ಜಗದಂಬಿಕಾ ಪಾಲ್‌ ಅವರು ಕೇಂದ್ರ ಸರ್ಕಾರದ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಿತಿಯ ಕಲಾಪಗಳನ್ನು ಪ್ರಹಸನದ ಮಟ್ಟಕ್ಕೆ ಇಳಿಸಿದ್ದು, ಪ್ರತಿಪಕ್ಷಗಳ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಸಭೆಯ ಕಾರ್ಯಸೂಚಿಯನ್ನು ಬದಲಿಸುತ್ತಾರೆ’ ಎಂದು ವಿಪಕ್ಷಗಳ ಸದಸ್ಯರು ಆರೋಪಿಸಿದರು.

ಈ ಆರೋಪಗಳನ್ನು ತಳ್ಳಿ ಹಾಕಿದ ಪಾಲ್, ಸಭೆಗೆ ಅಡ್ಡಿಪಡಿಸುವ ಉದ್ದೇಶದಿಂದ ವಿರೋಧ ಪಕ್ಷಗಳ ಸದಸ್ಯರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಸಭೆಯನ್ನು ಕೆಲ ಕಾಲ ಮುಂದೂಡಿದರು.

ಸಭೆ ಮತ್ತೆ ಆರಂಭವಾದಾಗ, ಪಾಲ್‌ ಹೇಳಿಕೆ ಖಂಡಿಸಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು.

‘ಟಿಎಂಸಿ ನಾಯಕ ಕಲ್ಯಾಣ ಬ್ಯಾನರ್ಜಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದ ಪಾಲ್‌, ‘ನಾನು ಕಲಾಪವನ್ನು ಹಳಿಗೆ ತರಲು ಪ್ರಯತ್ನಿಸಿದೆ. ಎರಡು ಬಾರಿ ಮುಂದೂಡಿದೆ. ಆದರೆ, ನನ್ನ ಪ್ರಯತ್ನಗಳೆಲ್ಲಾ ವ್ಯರ್ಥವಾದವು’ ಎಂದರು.

ಆಗ, ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು, ಗದ್ದಲ ಎಬ್ಬಿಸುತ್ತಿರುವ ವಿಪಕ್ಷಗಳ ಸದಸ್ಯರನ್ನು ದಿನದ ಮಟ್ಟಿಗೆ ಅಮಾನತುಗೊಳಿಸಬೇಕು ಎಂಬ ನಿರ್ಣಯ ಮಂಡಿಸಿದಾಗ, ಸಮಿತಿ ಅದಕ್ಕೆ ಅನುಮೋದನೆ ನೀಡಿತು.

ಪಾಲ್‌ ದೂರು: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗದಂಬಿಕಾ ಪಾಲ್‌, ‘ಸಭೆಯಲ್ಲಿ ಅನಗತ್ಯವಾಗಿ ಗದ್ದಲ ಉಂಟು ಮಾಡಿದ ಕಲ್ಯಾಣ ಬ್ಯಾನರ್ಜಿ ವರ್ತನೆಯಿಂದ ನನಗೆ ನೋವಾಗಿದೆ’ ಎಂದರು.

‘ಕಲ್ಯಾಣ ಬ್ಯಾನರ್ಜಿ ಇಂದು ಎಲ್ಲ ಮಿತಿಗಳನ್ನು ಮೀರಿದ್ದು, ಸಭೆಯ ಶಿಷ್ಟಾಚಾರವನ್ನೂ ಉಲ್ಲಂಘಿಸಿದ್ದಾರೆ’ ಎಂದು ಪಾಲ್‌ ಆರೋಪಿಸಿದರು.

ಪಾಲ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಲ್ಯಾಣ ಬ್ಯಾನರ್ಜಿ,‘ಪಾಲ್‌ ಅವರು ವಿಪಕ್ಷಗಳ ಸಂಸದರನ್ನು ತಮ್ಮ ಮನೆಗೆಲಸದವರಂತೆ ನೋಡುತ್ತಾರೆ’ ಎಂದರು.

ಜ.29ಕ್ಕೆ ಅನುಮೋದನೆ ಸಾಧ್ಯತೆ: ಸಮಿತಿಯು ಜ.29ರಂದು ಈ ವಿಚಾರ ಕುರಿತ ವರದಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸಮಿತಿ ಸದಸ್ಯರು ಹೇಳುವುದೇನು?

ಈ ಹಿಂದೆ ಜ.21ರಂದು ಸಮಿತಿ ಸಭೆ ನಡೆದಿತ್ತು. ಮುಂದಿನ ಸಭೆಯನ್ನು ಜ.24 ಮತ್ತು 25ರಂದು ನಡೆಸುವುದಾಗಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಅಂದಿನ ಸಭೆಯಲ್ಲಿ ತಿಳಿಸಿದ್ದರು. ಇದನ್ನು ನಾವು (ವಿಪಕ್ಷಗಳ ಸದಸ್ಯರು) ವಿರೋಧಿಸಿದ್ದೆವು. ಸಭೆಯನ್ನು ಜ.30 ಅಥವಾ 31ರಂದು ನಡೆಸುವಂತೆ ಕೋರಿ ಡಿಎಂಕೆ ನಾಯಕ ಎ.ರಾಜಾ ಪತ್ರವನ್ನೂ ಬರೆದಿದ್ದರು. ಅಧ್ಯಕ್ಷ ಪಾಲ್‌ ನಮ್ಮ ಮನವಿಗೆ ಸ್ಪಂದಿಸದೇ ಇಂದು ಸಭೆ ನಡೆಸಿದರು. ಸಭೆಯ ಕಾರ್ಯಸೂಚಿಯನ್ನು ಗುರುವಾರ ರಾತ್ರಿ ಬದಲಿಸಲಾಯಿತು ಹಾಗೂ ಈ ಕುರಿತು ಸದಸ್ಯರಿಗೆ ತಡರಾತ್ರಿ ತಿಳಿಸಲಾಯಿತು. ದೆಹಲಿ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ರೀತಿ ಮಾಡಲಾಗುತ್ತಿದೆ

– ಕಲ್ಯಾಣ ಬ್ಯಾನರ್ಜಿ ಟಿಎಂಸಿ ನಾಯಕ

***

ವಿರೋಧ ಪಕ್ಷಗಳ ಸದಸ್ಯರು ಸಭೆಯಲ್ಲಿ ನಿರಂತರವಾಗಿ ಗದ್ದಲ ಮಾಡುತ್ತಿದ್ದರು. ಅವರ ವರ್ತನೆ ಜುಗುಪ್ಸೆ ತರುವಂತಿತ್ತು. ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌ ವಿರುದ್ಧ ಅಸಂಸದೀಯ ಪದಗಳನ್ನೂ ಬಳಸುತ್ತಿದ್ದರು

–ಅಪರಾಜಿತಾ ಸಾರಂಗಿ ಬಿಜೆಪಿ ನಾಯಕಿ

***

ವಿರೋಧ ಪಕ್ಷಗಳ ಸಂಸದರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿರಲಿಲ್ಲ. ಹಾಜರಿ ಪುಸ್ತಕಕ್ಕೆ ಸಹಿ ಹಾಕದ ಅವರು ಗದ್ದಲ ಶುರು ಮಾಡಿದರು. ಇದು ವ್ಯವಸ್ಥಿತ ಪಿತೂರಿ. ಮೀರ್‌ವೈಜ್‌ ಉಮರ್‌ ಫಾರೂಕ್‌ ಹಾಗೂ ಇತರರು ತಮ್ಮ ಅಹವಾಲು ಸಲ್ಲಿಸುವುದು ವಿಪಕ್ಷಗಳ ಸಂಸದರಿಗೆ ಬೇಕಿರಲಿಲ್ಲ

–ಸಂಜಯ್‌ ಜೈಸ್ವಾಲ್ ಬಿಜೆಪಿ ಸಂಸದ

ಜಮ್ಮು–ಕಾಶ್ಮೀರ ನಿಯೋಗದಿಂದ ಅಹವಾಲು ಸಲ್ಲಿಕೆ

ಧಾರ್ಮಿಕ ಮುಖಂಡ ಮೀರ್‌ವೈಜ್‌ ಉಮರ್‌ ಫಾರೂಕ್‌ ನೇತೃತ್ವದ ಜಮ್ಮು–ಕಾಶ್ಮೀರದ ನಿಯೋಗವೊಂದು ಸಂಸದೀಯ ಸಮಿತಿ ಮುಂದೆ ಶುಕ್ರವಾರ ಹಾಜರಾಗಿ ವಕ್ಫ್‌ ತಿದ್ದುಪಡಿ ಮಸೂದೆ ಕುರಿತು ಅಹವಾಲು ಸಲ್ಲಿಸಿತು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೀರ್‌ವೈಜ್‌ ‘ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಹೀಗಾಗಿ ಈ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತೇವೆ’ ಎಂದರು. ‘ನಾವು ನೀಡುವ ಸಲಹೆಗಳನ್ನು ಸಮಿತಿಯು ಪರಿಗಣಿಸಿ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ಹೊಂದಿದ್ದೇವೆ. ತಮ್ಮ ಶಕ್ತಿ ಕುಂದಿಸಲಾಗುತ್ತಿದೆ ಎಂಬಂತಹ ಭಾವನೆ ಮುಸ್ಲಿಮರಲ್ಲಿ ಬರದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದೂ ಆಶಿಸುತ್ತೇನೆ’ ಎಂದೂ ಮೀರ್‌ವೈಜ್‌ ಹೇಳಿದರು.

- ಅಮಾನತುಗೊಂಡವರು

  • ಕಲ್ಯಾಣ ಬ್ಯಾನರ್ಜಿ, ನದೀಮ್‌ ಉಲ್ ಹಕ್‌ (ಟಿಎಂಸಿ)

  • ಮೊಹಮ್ಮದ್‌ ಜಾವೇದ್, ಇಮ್ರಾನ್‌ ಮಸೂದ್, ಸೈಯದ್‌ ನಾಸೀರ್ ಹುಸೇನ್‌ (ಕಾಂಗ್ರೆಸ್)

  • ಎ.ರಾಜಾ ಮತ್ತು ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ)

  • ಅಸಾದುದ್ದೀನ್‌ ಒವೈಸಿ (ಎಐಎಂಐಎಂ)

  • ಮೊಹಿಬುಲ್ಲಾ (ಎಸ್‌ಪಿ)

  • ಶಿವಸೇನಾದ (ಯುಬಿಟಿ) ಅರವಿಂದ ಸಾವಂತ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.