
ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಿ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಮಾಡಿರುವುದನ್ನು ಖಂಡಿಸಿ ದೇಶದ ಹಲವೆಡೆ ಭಾನುವಾರ ಪ್ರತಿಭಟನೆ ಮತ್ತು ಶೋಕಾಚರಣೆಗಳು ನಡೆದವು.
ಶಿಯಾ ಸಮುದಾಯದ 15 ಲಕ್ಷ ಜನರಿರುವ ಕಾಶ್ಮೀರದ ಲಾಲ್ ಚೌಕ್, ಸೈದಾ ಕದಲ್, ಬದ್ಗಾಮ್, ಬಂಡಿಪೋರಾ, ಅನಂತನಾಗ್ ಮತ್ತು ಪುಲ್ವಾಮಗಳಲ್ಲಿ ಪ್ರತಿಭಟನೆ ತೀವ್ರವಾಗಿತ್ತು.
ಪ್ರತಿಭಟನಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಹಾಕುತ್ತ ಎದೆಗೆ ಕೈಯಿಂದ ಬಡಿದುಕೊಂಡರು.
ಸೋಮವಾರವೂ ಬಂದ್‌ಗೆ ಕರೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದಾದ್ಯಂತ ಶಾಲಾ–ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ದೇಶದಲ್ಲಿನ ಅನೇಕ ಮುಸ್ಲಿಂ ಸಂಘ–ಸಂಸ್ಥೆಗಳು ಹಲವು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾವೆ ಮತ್ತು ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದಾವೆ.
ಉತ್ತರಪ್ರದೇಶದ ಬಾರಾ ಇಮಾಂಬಾರ ಮಸೀದಿ ಬಳಿ ಜನರು ಪ್ರತಿಭಟನೆ ನಡೆಸಿದರು. ಮಹಿಳೆಯರು ಖಮೇನಿ ಚಿತ್ರಗಳನ್ನು ಹಿಡಿದುಕೊಂಡು ಶೋಕತಪ್ತರಾಗಿದ್ದರು.
‘ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿಗಳನ್ನು ದಹಿಸುವುದಾಗಿ’ ಅಖಿಲ ಭಾರತೀಯ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲನಾ ಯಾಸೂಬ್ ಅಬ್ಬಾಸ್ ಘೋಷಿಸಿದ್ದಾರೆ.
‘ಶಿಯಾ ಸಮುದಾಯವು ಮೂರು ದಿನ ಶೋಕಾಚರಣೆಯನ್ನು ನಡೆಸಲಿದೆ. ಈ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ, ಮನೆಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸಿ, ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಪಂಜಾಬ್‌ನ ಲೂಧಿಯಾನದಲ್ಲಿಯೂ ಪ್ರತಿಭಟನೆ ಮತ್ತು ಪ್ರತಿಕೃತಿ ದಹನ ನಡೆಯಿತು. ಅಜ್ಮೇರ್‌ನಲ್ಲಿ ಶೋಕಾಚರಣೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.