ADVERTISEMENT

ಪಿಎಫ್‌ ಬಡ್ಡಿ ದರ ಕಡಿತ: ಚುನಾವಣೆ ಗೆದ್ದ ಬಳಿಕ ಬಿಜೆಪಿಯ ‘ಕೊಡುಗೆ’– ಮಮತಾ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2022, 7:07 IST
Last Updated 13 ಮಾರ್ಚ್ 2022, 7:07 IST
ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ   

ಕೋಲ್ಕತಾ: ಉತ್ತರ ಪ್ರದೇಶದಲ್ಲಿ ಚುನಾವಣೆ ಗೆದ್ದ ಬಳಿಕ, ಬಿಜೆಪಿ ಸರ್ಕಾರವು ತಕ್ಷಣ 'ಕೊಡುಗೆ'ಯನ್ನು ಹೊತ್ತು ತಂದಿದೆ. ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ನೀಡುವ ಬಡ್ಡಿದರವನ್ನು ನಾಲ್ಕು ದಶಕದಲ್ಲೇ ಅತ್ಯಂತ ಕಡಿಮೆಗೆ ಇಳಿಸಲು ಮುಂದಾಗುವ ಮೂಲಕ ತನ್ನ ಮುಖವಾಡವನ್ನು ಕಳಚಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಕೊರೊನಾ ಸಂಕಷ್ಟದಿಂದ ಹಣಕಾಸಿನ ತೊಂದರೆ ಅನುಭವಿಸುತ್ತಿರುವ ರಾಷ್ಟ್ರದ ಮಧ್ಯಮ ಮತ್ತು ಕೆಳ ಹಂತದ ಕಾರ್ಮಿಕರಿಗೆ ಮತ್ತು ಉದ್ಯೋಗಿಗಳಿಗೆ ಪಿಎಫ್‌ ಬಡ್ಡಿ ದರ ಕಡಿತವು ಹೊರೆಯಾಗಲಿದೆ ಎಂದು ಟ್ವೀಟ್‌ ಮೂಲಕ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗಗಳ ದುಡ್ಡಿನಲ್ಲಿ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಯುವ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿದೆ. ಸಾರ್ವಜನಿಕರ ಮೇಲೆ ಹೊರೆಯನ್ನು ಹೇರುವ ಮೂಲಕ ಜನ ವಿರೋಧಿ, ಕಾರ್ಮಿಕರ ವಿರೋಧಿ ಹೆಜ್ಜೆಗಳು ಸರ್ಕಾರ ಇಡುತ್ತಿದೆ. ಇದನ್ನು ಒಗ್ಗಟ್ಟಿನ ಪ್ರತಿಭಟನೆಗಳ ಮೂಲಕ ವಿರೋಧಿಸಬೇಕು ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.

ADVERTISEMENT

ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ 2021–22ನೇ ಸಾಲಿಗೆ ನೀಡುವ ಬಡ್ಡಿದರವನ್ನು ಶೇ 8.5 ರಿಂದ ಶೇ 8.1ಕ್ಕೆ ತಗ್ಗಿಸಲು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನಿರ್ಧರಿಸಿದೆ. ಈಗ ನಿಗದಿಪಡಿಸಿರುವ ಬಡ್ಡಿದರವು 1977–78 ರಿಂದೀಚೆಗಿನ ಅತ್ಯಂತ ಕಡಿಮೆ ಮಟ್ಟದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.