ನವದೆಹಲಿ: ಪಿಎಸ್‌ಐ ಹಗರಣ ಹಾಗೂ ಕೆಇಎ ನೇಮಕಾತಿ ಪರೀಕ್ಷೆ ಬರೆಯಲು ಹಣ ಪಡೆದು ಬ್ಲೂಟೂತ್ ನೀಡಿದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮುಂದೂಡಿದೆ.
ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಾಟೀಲ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯನ್ನು ನ್ಯಾಯಪೀಠ ಈ ಹಿಂದೆ ವಜಾಗೊಳಿಸಿತ್ತು. ಆ ಬಳಿಕ, ವೈದ್ಯಕೀಯ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ಆರೋಪಿಗೆ ಶಸ್ತ್ರಚಿಕಿತ್ಸೆಯ ಅಗತ್ಯ ಇಲ್ಲ ಎಂದು ಸಂಸ್ಥೆ ವರದಿ ನೀಡಿತ್ತು.
ವಾದ ಮಂಡನೆಗೆ ಒಂದು ವಾರಗಳ ಕಾಲಾವಕಾಶ ನೀಡಬೇಕು ಎಂದು ಪಾಟೀಲ ಪರ ವಕೀಲರು ಕೋರಿದರು. ಪೀಠವು ವಿಚಾರಣೆ ಮುಂದೂಡಿತು. ಕರ್ನಾಟಕ ಸರ್ಕಾರದ ಪರ ವಕೀಲ ಡಿ.ಎಲ್.ಚಿದಾನಂದ ವಾದಿಸಿದರು.
ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಸಂಬಂಧ ಹೈಕೋರ್ಟ್‌ನ ಕಲಬುರಗಿ ಪೀಠದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದ ಪಾಟೀಲ ಬಿಡುಗಡೆಯಾದ ದಿನದಿಂದಲೇ ನಾಪತ್ತೆಯಾಗಿದ್ದ. ಸಿಐಡಿ ಪೊಲೀಸರು ಹಲವು ನೋಟಿಸ್ ಜಾರಿಗೊಳಿಸಿದ್ದರೂ ಹಾಜರಿ ಆಗಿರಲಿಲ್ಲ. ಕೆಲ ದಿನಗಳ ಬಳಿಕ ಹಾಜರಾಗಿದ್ದ. ಕೆಇಎ ಪ್ರಕರಣದಲ್ಲೂ ತಲೆಮರೆಸಿಕೊಂಡಿದ್ದ.
19ಕ್ಕೂ ಹೆಚ್ಚು ಪ್ರಕರಣ ದಾಖಲು: ಪಿಎಸ್‌ಐ ಹಗರಣ, ಕೆಇಎ ಬ್ಲೂಟೂತ್ ಅಕ್ರಮ, ಕೌಟುಂಬಿಕ ಪ್ರಕರಣದ ಸೇರಿ ಆರ್.ಡಿ. ಪಾಟೀಲ ವಿರುದ್ಧ 19ಕ್ಕೂ ಹೆಚ್ಚು ಪ್ರಕರಣಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.