ADVERTISEMENT

ಕೋವಿಡ್ ಬೂಸ್ಟರ್ ಲಸಿಕೆಯಿಂದ ಎಚ್ಐವಿ ಬರುತ್ತದೆ ಎಂಬುದಕ್ಕೆ ಪುರಾವೆ ಇಲ್ಲ– ತಜ್ಞರು

ಪಿಟಿಐ
Published 18 ಫೆಬ್ರುವರಿ 2022, 11:55 IST
Last Updated 18 ಫೆಬ್ರುವರಿ 2022, 11:55 IST
   

ನವದೆಹಲಿ: ಕೋವಿಡ್ ಬೂಸ್ಟರ್‌ ಡೋಸ್ ಲಸಿಕೆ ಎಚ್‌ಐವಿಗೆ ಕಾರಣವಾಗಬಹುದು. ಈ ಬಗ್ಗೆ ಫ್ರೆಂಚ್ ವೈರಾಣು ತಜ್ಞ ಲೂಕ್ ಮೊಂಟಾಗ್ನಿಯರ್‌ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಮಾಹಿತಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹಲವು ತಜ್ಞರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.

ಏಡ್ಸ್‌ ರೋಗಕ್ಕೆ ಕಾರಣವಾಗುವ ಇಮ್ಯುನೊಡೆಫಿಷಿಯನ್ಸಿ ವೈರಸ್(ಎಚ್‌ಐವಿ) ಪತ್ತೆಹಚ್ಚಿದ 2008ರ ವೈದ್ಯಕೀಯ ನೊಬೆಲ್ ಪುರಸ್ಕೃತ ವಿಜ್ಞಾನಿಗಳ ತಂಡದಲ್ಲಿದ್ದ ಮೊಂಟಾಗ್ನಿಯರ್‌, ಈ ತಿಂಗಳ ಆರಂಭದಲ್ಲಿ ಸಾವಿಗೀಡಾದರು. ಅಂದಿನಿಂದ ಕೆಲ ಟ್ವೀಟಿಗರು, ಅವರೇ(ಮೊಂಟಾಗ್ನಿಯರ್‌) ಹೇಳಿದ್ದಾರೆ ಎನ್ನಲಾದ ‘ಮೂರನೇ ಡೋಸ್ ಲಸಿಕೆ ಪಡೆದವರು ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳಿ. ವರದಿ ನಿಮ್ಮನ್ನು ಅಚ್ಚರಿಗೊಳಿಸಬಹುದು. ಬಳಿಕ, ನಿಮ್ಮ ಸರ್ಕಾರದ ವಿರುದ್ಧ ದಾವೆ ಹೂಡಿ’ ಎಂಬ ಹೇಳಿಕೆಯನ್ನು ಹಂಚಿಕೊಳ್ಳುತ್ತಿದ್ದರು.

ಕೋವಿಡ್ ಬೂಸ್ಟರ್‌ಗಳು ವ್ಯಕ್ತಿಯನ್ನು ಎಚ್‌ಐವಿ ಸೋಂಕಿಗೆ ಗುರಿಯಾಗುವಂತೆ ಮಾಡುತ್ತವೆ ಅಥವಾ ವೈರಾಣು ತಜ್ಞ ಲೂಕ್ ಮೊಂಟಾಗ್ನಿಯರ್‌ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಲವಾರು ವೈರಾಣು ತಜ್ಞರು ತಿಳಿಸಿರುವುದಾಗಿ ಪಿಟಿಐ ಹೇಳಿದೆ.

‘ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ಹೇಗೆ ಎಚ್‌ಐವಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ತಪ್ಪು ಮಾಹಿತಿ ಮತ್ತು ವೈಜ್ಞಾನಿಕ ಪುರಾವೆಗಳಿಲ್ಲದ ಮಾಹಿತಿಯನ್ನು ನಾವು ಹರಡಬಾರದು’ಎಂದು ಕೋಲ್ಕತ್ತದ ಸಿಎಸ್‌ಐಆರ್–ಕೆಮಿಕಲ್ ಬಯಾಲಜಿಯ ಭಾರತೀಯ ಸಂಸ್ಥೆಯ ವೈರಾಣು ತಜ್ಞೆ ಉಪಾಸನಾ ರಾಯ್ ಹೇಳಿದ್ದಾರೆ.

ADVERTISEMENT

ಕೋವಿಡ್ ಲಸಿಕೆಗಳು ಯಾವುದೇ ವಿಧದಲ್ಲೂ ಎಚ್‌ಐವಿ ಸೋಂಕಿಗೆ ಕಾರಣವಾಗುವುದಿಲ್ಲ ಎಂದು ಲಸಿಕಾ ತಜ್ಞೆ ವನೂತಾ ಬಾಲ್ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವೈರಾಣು ತಜ್ಞ ಲೂಕ್ ಮೊಂಟಾಗ್ನಿಯರ್‌ ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

‘ಲಸಿಕೆಯು ರೋಗ ನಿರೋಧಕ ಶಕ್ತಿಯ ನಿಗ್ರಹಿಸುವ ಮೂಲಕ ಎಚ್ಐವಿ ಸೋಂಕಿಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ‘ ಎಂದು ಪುಣೆಯ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಹೇಳಿದ್ದಾರೆ.

ವೈರಾಲಜಿಸ್ಟ್ ನಾಗ ಸುರೇಶ್ ವೀರಪು ಅವರ ಪ್ರಕಾರ, ಕೋವಿಡ್ ಲಸಿಕೆ ನಂತರ ಎಚ್ಐವಿ ಸೋಂಕಿನ ಸಾಧ್ಯತೆಗಳ ನಡುವಿನ ಸಂಬಂಧಕ್ಕೆ ಇಲ್ಲಿಯವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.