
ಪ್ರಾತಿನಿಧಿಕ ಚಿತ್ರ
ಮುಂಬೈ: ಮತದಾರರ ವಿಳಾಸವಾಗಿ ಸಾರ್ವಜನಿಕ ಶೌಚಾಲಯ, ಪಾಲಿಕೆ ಆಯುಕ್ತರ ಕಚೇರಿ ಮತ್ತು ನೆರುಲ್ ಉಪನಗರ ರೈಲು ನಿಲ್ದಾಣವನ್ನೇ ನಮೂದಿಸಿರುವುದು ನವಿ ಮುಂಬೈ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಂಡುಬಂದಿದೆ.
ಭಾರಿ ಅಕ್ರಮಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್), ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದೆ. ಹಾಗೆಯೇ, ಮತದಾರರ ಪಟ್ಟಿಯನ್ನು ಕೂಡಲೇ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದೆ.
'ಇವುಗಳನ್ನು ಅಕ್ಷರದೋಷವೆಂದು ಸುಮ್ಮನೆ ಬಿಡಲು ಸಾಧ್ಯವಿಲ್ಲ' ಎಂದು ನವಿ ಮುಂಬೈ ಎಂಎನ್‌ಎಸ್ ಅಧ್ಯಕ್ಷ ಹಾಗೂ ಪಕ್ಷದ ವಕ್ತಾರ ಗಜಾನನ ಕಾಳೆ ಹೇಳಿದ್ದಾರೆ.
'ಸಾರ್ವಜನಿಕ ಶೌಚಾಲಯವು ಯಾರೊಬ್ಬರ ವಿಳಾಸವಾಗದು. ಆದರೂ, ಅದೇ ರೀತಿಯಲ್ಲಿ ಮತದಾರರ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಹಾದಿ ತಪ್ಪಿದೆ ಎಂಬುದಕ್ಕೆ ಇದಕ್ಕಿಂತಲೂ ಯಾವ ಪುರಾವೆ ಬೇಕು?' ಎಂದು ಕೇಳಿದ್ದಾರೆ.
ಪಾಲಿಕೆ ಆಯುಕ್ತರ ಅಧಿಕೃತ ನಿವಾಸವೇ 127 ಮತದಾರರ ವಿಳಾಸವೆಂದು ನಮೂದಾಗಿರುವುದು ಅನುಮಾನಗಳನ್ನು ಮೂಡಿಸಿದೆ ಎಂದು ಒತ್ತಿ ಹೇಳಿರುವ ಅವರು, 'ಇವು ತಾಂತ್ರಿಕ ದೋಷಗಳಲ್ಲ. ಉದ್ದೇಶಪೂರ್ವಕ ಬೇಜವ್ದಾರಿ ಅಥವಾ ಪಿತೂರಿಗಳಾಗಿವೆ. ಇಂತಹ ಬೋಗಸ್ ಪರಿಷ್ಕರಣಾ ಪ್ರಕ್ರಿಯೆಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ವಿಚಾರಗಳು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುತ್ತವೆ ಎಂದು ನಾಗರಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಾಮಾಜಿಕ ಕಾರ್ಯಕರ್ತ ಬಿ.ಎನ್. ಕುಮಾರ್ ಅವರು, 'ಮತದಾರರ ಪಟ್ಟಿಯ ಅಸಲಿಯತ್ತಿನ ಬಗ್ಗೆಯೇ ಅನುಮಾನಗಳಿದ್ದರೆ, ಪ್ರಜಾಪ್ರಭುತ್ವ ಪ್ರಕ್ರಿಯೆಯೂ ತಾನಾಗಿಯೇ ಅಲುಗಾಡಲಾರಂಭಿಸುತ್ತದೆ. ಇದು ರಾಜಕೀಯವನ್ನು ಮೀರಿದ ವಿಚಾರ. ವ್ಯವಸ್ಥೆಯ ಮೇಲಿನ ನಂಬಿಕೆಗೆ ಸಂಬಂಧಿಸಿದ್ದು' ಎಂದು ಪ್ರತಿಪಾದಿಸಿದ್ದಾರೆ.
ದೇಶದ ವಿವಿಧೆಡೆ ಮತದಾರರ ಪಟ್ಟಿಯಲ್ಲಿನ ದೋಷಗಳ ಬಗ್ಗೆ ವರದಿಯಾಗುತ್ತಿರುವ ಸಂದರ್ಭದಲ್ಲೇ, ನವಿ ಮುಂಬೈ ಮತದಾರರ ಪಟ್ಟಿಯಲ್ಲಿನ ತಪ್ಪುಗಳು ಬಹಿರಂಗವಾಗಿವೆ. ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಯಲ್ಲಿಯೂ ಇಂಥದೇ ದೂರುಗಳು ಕೇಳಿಬಂದಿವೆ.
ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಹುಡುಕಲು ನಿಜವಾದ ಮತದಾರರು ಪ್ರಯಾಸ ಪಡುತ್ತಿದ್ದರು. ಹೀಗಿರುವಾಗ, ಪರಿಶೀಲನೆಯಾಗದ ಹೆಸರುಗಳು ಮತದಾರರ ಪಟ್ಟಿಗೆ ನುಸುಳುವುದು ಮುಂದುವರಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚುನಾವಣಾ ಆಯೋಗ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಪಾರದರ್ಶಕವಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುವ ಮೂಲಕ, ಚುನಾವಣಾ ವ್ಯವಸ್ಥೆ ಮೇಲೆ ಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ನಾಗರಿಕ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.