ADVERTISEMENT

ಮಹಾರಾಷ್ಟ್ರದಲ್ಲಿ ಭೌಗೋಳಿಕವಾಗಿ ಮುಂಬೈಗಿಂತ ದೊಡ್ಡ ನಗರ ಪುಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 18:52 IST
Last Updated 1 ಜುಲೈ 2021, 18:52 IST

ಮುಂಬೈ: ಭೌಗೋಳಿಕ ವಿಸ್ತೀರ್ಣದ ವ್ಯಾಪ್ತಿಯ ದೃಷ್ಟಿಯಿಂದ ಪುಣೆ ನಗರವು ಮಹಾರಾಷ್ಟ್ರದ ಅತಿದೊಡ್ಡ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನೂ ಹಿಂದಿಕ್ಕಿದೆ.

ಪುಣೆ ಮಹಾನಗರಪಾಲಿಕೆಯ (ಪಿಎಂಸಿ) ವ್ಯಾಪ್ತಿಯು ಈಗ 518 ಚದರ ಕಿ.ಮೀ ಆಗಿದ್ದರೆ, ಬೃಹನ್ ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ವ್ಯಾಪ್ತಿಯು 434 ಚದರ ಕಿ.ಮೀ ಆಗಿರುತ್ತದೆ.

ಪುಣೆ ಮಹಾನಗರಪಾಲಿಕೆಯ ಈ ಮೊದಲಿನ ವ್ಯಾಪ್ತಿ 331 ಚದರ ಕಿ.ಮೀ ಇತ್ತು. ಮಹಾರಾಷ್ಟ್ರದ ನಗರಾಭಿವೃದ್ಧಿ ಇಲಾಖೆಯು ಇದರ ವ್ಯಾಪ್ತಿಗೆ ಆಸುಪಾಸಿನ 23 ಗ್ರಾಮಗಳನ್ನು ಸೇರಿಸಿ ಆದೇಶ ಹೊರಡಿಸಿದೆ. ಈ ಮೂಲಕ ಪುಣೆಯ ನಗರಪಾಲಿಕೆಯ ಒಟ್ಟು ವ್ಯಾಪ್ತಿಯು 518 ಚದರ ಕಿ.ಮೀಗಳಿಗೆ ಹಿಗ್ಗಿದೆ.

ADVERTISEMENT

ಆದರೂ, ಬಜೆಟ್‌ ಗಾತ್ರ ಹಾಗೂ ಜನಸಂಖ್ಯೆಯನ್ನು ಪರಿಗಣಿಸಿದರೆ ಪುಣೆ ಈಗಲೂ ಮುಂಬೈ ನಂತರದ ಸ್ಥಾನದಲ್ಲಿಯೇ ಇದೆ. 2021–22ನೇ ಹಣಕಾಸು ವರ್ಷದಲ್ಲಿ ಮುಂಬೈ ಪಾಲಿಕೆಯ ಬಜೆಟ್‌ ಗಾತ್ರ 39,038 ಕೋಟಿ ಆಗಿದ್ದರೆ, ಪುಣೆ ಪಾಲಿಕೆಯ ಬಜೆಟ್ ಗಾತ್ರ 8,370 ಕೋಟಿ ಆಗಿದೆ.

ಪುಣೆಯ ಸದ್ಯದ ಜನಸಂಖ್ಯೆಯು 34 ಲಕ್ಷ ಆಗಿದ್ದರೆ, ಮುಂಬೈ ನಗರಪಾಲಿಕೆಯ ಜನಸಂಖ್ಯೆಯು 1.2 ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.