ADVERTISEMENT

ಪುಣೆ ನಗರ ಪಾಲಿಕೆ ಚುನಾವಣೆ: ಎನ್‌ಸಿಪಿ ಬಣಗಳ ಮಧ್ಯೆ ಮೈತ್ರಿ

ಪಿಟಿಐ
Published 29 ಡಿಸೆಂಬರ್ 2025, 16:06 IST
Last Updated 29 ಡಿಸೆಂಬರ್ 2025, 16:06 IST
   

ಪುಣೆ: ಪುಣೆ ನಗರ ಪಾಲಿಕೆ ಚುನಾವಣೆಗಾಗಿ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೋಮವಾರ ಮೈತ್ರಿ ಮಾಡಿಕೊಂಡಿವೆ.

ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಳ್ಳಲು ಒಂದೇ ಒಂದು ದಿನ ಬಾಕಿ ಇರುವಾಗ ಪ್ರತಿಸ್ಪರ್ಧಿಗಳಾಗಿದ್ದ ಎರಡು ಬಣಗಳು ಒಗ್ಗಟ್ಟು ಪ್ರದರ್ಶಿಸಿವೆ. ಉಭಯ ಪಕ್ಷಗಳ ನಾಯಕರು ಸಭೆ ನಡೆಸಿದ ಬಳಿಕ ಈ ಕುರಿತು ಘೋಷಣೆ ಮಾಡಿದರು.

‘ಎನ್‌ಸಿಪಿ (ಎಸ್‌ಪಿ) ಬಣದ ಪುಣೆ ಘಟಕದ ಅಧ್ಯಕ್ಷ ಪ್ರಶಾಂತ್‌ ಜಗತಾಪ್‌ ಅವರು ಪಕ್ಷದಿಂದ ನಿರ್ಗಮನವಾದ ಬಳಿಕ ಪಕ್ಷದ ಕಾರ್ಯಕರ್ತರು ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಳೆ ಅವರನ್ನು ಭೇಟಿ ಮಾಡಿ, ಎನ್‌ಸಿಪಿ (ಎಪಿ) ಜೊತೆ ಕೈಜೋಡಿಸುವ ಅಗತ್ಯವನ್ನು ಮನವರಿಕೆ ಮಾಡಿದ್ದರು. ಸ್ಥಳೀಯ ಕಾರ್ಯಕರ್ತರ ಕೋರಿಕೆಯನ್ನು ಪರಿಗಣಿಸಿ ಈ ಮೈತ್ರಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್‌ ತಿಳಿಸಿದರು.

ADVERTISEMENT

ಉಭಯ ಪಕ್ಷಗಳು ಪುಣೆ ಮತ್ತು ಪಿಂಪ್ರಿ–ಚಿಂಚವಾಡ  ನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲಿವೆ ಎಂದು ಹೇಳಿದರು.

‘ಮೈತ್ರಿ ಮಾತುಕತೆಯಲ್ಲಿ ಶರದ್‌ ಪವಾರ್ ಅವರು ಭಾಗಿಯಾಗಿಲ್ಲ. ಸೀಟು ಹಂಚಿಕೆ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ’ ಎಂದರು.

ಪಿಂಪ್ರಿ – ಚಿಂಚವಾಡ ನಗರ ಪಾಲಿಕೆಗಳು ಪವಾರ್‌ ಕುಟುಂಬಕ್ಕೆ ರಾಜಕೀಯವಾಗಿ ನಿರ್ಣಾಯಕವಾಗಿವೆ. ಅಲ್ಲದೆ ಇವುಗಳ ವ್ಯಾಪ್ತಿಯಲ್ಲಿ ಹಲವು ಐಟಿ ಮತ್ತು ಕೈಗಾರಿಕಾ ಘಟಕಗಳಿವೆ. ಈ ಪ್ರದೇಶವು ದಶಕಗಳಿಂದ ಪವಾರ್‌ ಕುಟುಂಬದ ಭದ್ರಕೋಟೆಯಾಗಿ ಉಳಿದಿದೆ.

ಮಹಾರಾಷ್ಟ್ರದ 29 ನಗರ ಪಾಲಿಕೆಗಳಿಗೆ ಜನವರಿ 15ರಂದು ಚುನಾವಣೆ ನಡೆಯಲಿದ್ದು, ಮರುದಿನವೇ ಫಲಿತಾಂಶ ಘೋಷಣೆಯಾಗಲಿದೆ.

ಮೈತ್ರಿಗೆ ಮುಂದಾದ ಕಾಂಗ್ರೆಸ್‌

ಮುಂಬೈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ತನ್ನ ನಿರ್ಧಾರದಿಂದ ಕಾಂಗ್ರೆಸ್‌ ಹಿಂದೆ ಸರಿದಿದೆ. ಎಲ್ಲಾ 227 ವಾರ್ಡ್‌ಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಕಾಂಗ್ರೆಸ್‌ ಪಕ್ಷವು ಪ್ರಕಾಶ್‌ ಅಂಬೀಡ್ಕರ್ ನೇತೃತ್ವದ ವಂಚಿತ ಬಹುಜನ ಆಘಾಡಿ (ವಿಬಿಎ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 62 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಸಮಾಜ ಪಕ್ಷಕ್ಕೆ (ಆರ್‌ಎಸ್‌ಪಿ) 10 ಮತ್ತು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷಕ್ಕೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ ಎಂದು ಪಕ್ಷದ ನಾಯಕರು ತಿಳಿಸಿದರು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮುಂಬೈ ಕಾಂಗ್ರೆಸ್‌ ಅಧ್ಯಕ್ಷೆ ವರ್ಷಾ ಗಾಯಕ್ವಾಡ್‌ ಅವರು ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಬದ್ಧತೆಯಿಂದ ಕಾಂಗ್ರೆಸ್‌ ಮತ್ತು ವಿಬಿಎ ಮೈತ್ರಿ ಮಾಡಿಕೊಂಡಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.