ADVERTISEMENT

ಉಚಿತವಾಗಿ ಬಿರಿಯಾನಿ ಕೇಳಿದ ಪುಣೆ ಡಿಸಿಪಿ ಆಡಿಯೊ ವೈರಲ್‌: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 14:00 IST
Last Updated 30 ಜುಲೈ 2021, 14:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ತಮ್ಮ ಸರಹದ್ದಿನಲ್ಲಿ ಬರುವ ಹೋಟೆಲ್‌ನಿಂದ ಉಚಿತವಾಗಿ ಬಿರಿಯಾನಿ ಕೊಂಡು ತರುವಂತೆ ಪುಣೆಯ ಮಹಿಳಾ ಡಿಸಿಪಿಯೊಬ್ಬರು ತಮ್ಮ ಅಧೀನ ಸಿಬ್ಬಂದಿಗೆ ಹೇಳುವ ಆಡಿಯೊವೊಂದು ಮಹಾರಾಷ್ಟ್ರದಲ್ಲಿ ವೈರಲ್‌ ಆಗಿದ್ದು, ಪೊಲೀಸ್‌ ಇಲಾಖೆ ತೀವ್ರ ಮುಜುಗರಕ್ಕೀಡಾಗಿದೆ.

ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌, ಪ್ರಕರಣದ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.

ಈ ಬಗ್ಗೆ ಮಹಾರಾಷ್ಟ್ರ ಗೃಹ ಇಲಾಖೆ ಮತ್ತು ಪುಣೆ ಪೊಲೀಸ್‌ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಸಂಸ್ಥೆಗಳು ನಿರಂತರ ಪ್ರಯತ್ನ ನಡೆಸಿವೆಯಾದರೂ, ಯಾರೊಬ್ಬರೂ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿಯನ್ನು ಪತಿ ಇಷ್ಟಪಡುವುದಾಗಿ ಹೇಳುವ ಮಹಿಳಾ ಐಪಿಎಸ್‌ ಅಧಿಕಾರಿ, ಅದರ ಜೊತೆಗೆ ಪ್ರಾನ್‌ ಮಸಾಲಾ, ಫ್ರೈಯ್ಡ್‌ ಫಿಷ್‌ ತರುವಂತೆಯೂ ತಮ್ಮ ಅಧೀನ ಸಿಬ್ಬಂದಿಗೆ ಸೂಚಿಸುವುದು ಆಡಿಯೊದಲ್ಲಿದೆ.

ಹಣ ಪಾವತಿಯ ಬಗ್ಗೆ ಸಿಬ್ಬಂದಿಯು ಭಯದಿಂದ ಪ್ರಶ್ನೆ ಮಾಡಿದಾಗ ಏರುಧನಿಯಲ್ಲಿ ಮಾತನಾಡುವ ಐಪಿಎಸ್‌ ಅಧಿಕಾರಿ, "ನಾವು ನಮ್ಮ ಸರಹದ್ದಿನ ಹೋಟೆಲ್‌ಗೆ ದುಡ್ಡು ಪಾವತಿ ಮಾಡಬೇಕೆ? ನೀವೇ ಇದನ್ನು ಮಾಡಬೇಕು, ಇಲ್ಲವೇ ಬೀಟ್‌ ಪೊಲೀಸ್‌ಗೆ ಇದನ್ನು ಮಾಡಲು ಹೇಳಿ. ಅವರೊಂದಿಗೆ ನಾನು ಮಾತಾಡಬೇಕಿಲ್ಲ,‘ ಎಂದು ಜೋರು ಮಾಡುತ್ತಾರೆ.

ಘಟನೆ ಕುರಿತಂತೆ ವರದಿ ನೀಡುವಂತೆ ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಅವರಿಗೆ ಗೃಹ ಸಚಿವರು ತಿಳಿಸಿದ್ದಾರೆ. ಆಡಿಯೊ ನೈಜತೆಯನ್ನು ಪುಣೆ ಸೈಬರ್ ಪೊಲೀಸರು ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.