ADVERTISEMENT

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸಿಗದ ಮನ್ನಣೆ: ಸಿಧು ಪ‍್ರಚಾರದಿಂದ ದೂರ

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚನ್ನಿ ಆಯ್ಕೆಗೆ ಅತೃಪ್ತಿ

ಗೌತಮ್ ಧೀರ್
Published 15 ಫೆಬ್ರುವರಿ 2022, 19:45 IST
Last Updated 15 ಫೆಬ್ರುವರಿ 2022, 19:45 IST
ನವಜೋತ್‌ ಸಿಂಗ್‌ ಸಿಧು
ನವಜೋತ್‌ ಸಿಂಗ್‌ ಸಿಧು    

ಅಮೃತಸರ: ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ತಾವು ಸ್ಪರ್ಧಿಸಿರುವ ಅಮೃತಸರ ಪೂರ್ವ ಕ್ಷೇತ್ರದ ಹೊರಗೆ ಪ್ರಚಾರಕ್ಕೆ ಹೋಗಿದ್ದು ಬಹಳ ಕಡಿಮೆ. ಸಿಧು ಅವರ ಈ ನಡವಳಿಕೆ ಪಕ್ಷದಲ್ಲಿ ಅತೃಪ್ತಿಗೆ ಕಾರಣವಾಗಿದೆ.

ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್‌ ಪಕ್ಷ ಘೋಷಿಸಿದೆ. ಇದು ಸಿಧು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿಯೇ, ಪ್ರಚಾರ ಬಿರುಸುಗೊಂಡಿದ್ದರೂ ಸಿಧು ಅವರು ತಣ್ಣಗೆ ಉಳಿದಿದ್ದಾರೆ ಎನ್ನಲಾಗಿದೆ. ಇದೇ 20ರಂದು ಪಂಜಾಬ್‌ ವಿಧಾನಸಭೆಗೆ ಮತದಾನ ನಡೆಯಲಿದೆ.

ಸಿಧು ಅವರ ಹೆಂಡತಿ ನವಜೋತ್‌ ಕೌರ್‌ ಮತ್ತು ಮಗಳು ಸಬಿಯಾ ಅವರು ಚನ್ನಿ ಅವರನ್ನು ಟೀಕಿಸಲು ಹಿಂದೆ ಮುಂದೆ ನೋಡುತ್ತಿಲ್ಲ. ಚನ್ನಿ ಅವರು ತಮ್ಮನ್ನು ‘ಸಾಮಾನ್ಯ ಮನುಷ್ಯ’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದನ್ನು ಕೌರ್‌ ಮತ್ತು ಸಬಿಯಾ ಪ್ರಶ್ನಿಸುತ್ತಿದ್ದಾರೆ. ತಾಯಿ–ಮಗಳಿಬ್ಬರೂ ಸಿಧು ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ. ‘ಚನ್ನಿ ಅವರು ಸಾಮಾನ್ಯ ವ್ಯಕ್ತಿ ಏನೂ ಅಲ್ಲ. ಅವರ ಸಂಪತ್ತಿನ ಮೌಲ್ಯ ದೊಡ್ಡ ಮೊತ್ತವೇ ಆಗಿದೆ’ ಎಂದು ಪ್ರಚಾರದ ವೇಳೆಯಲ್ಲಿ ಹೇಳುತ್ತಿದ್ದಾರೆ.ಚನ್ನಿ ಅವರು ಸಾಮಾನ್ಯ ವ್ಯಕ್ತಿ ಎಂದು ರಾಹುಲ್‌ ಅವರನ್ನು ತಪ್ಪುದಾರಿಗೆ ಎಳೆಯಲಾಗಿದೆ ಎಂದೂ ಕೌರ್‌ ಆಪಾದಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ಪ‍್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಗ್ರೂರ್‌ ಕ್ಷೇತ್ರದ ಧುರಿ ಎಂಬಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಕಾರ್ಯಕ್ರಮದಲ್ಲಿ ಸಿಧು ಅವರು ಹಾಜರಿದ್ದರು. ಆದರೆ, ಸಿಧು ಅವರು ವೇದಿಕೆ ಏರಲು ನಿರಾಕರಿಸಿದ್ದರು. ರಾಜ್ಯದ ಜನರು ಚನ್ನಿ ಅವರ ಮಾತು ಕೇಳಬೇಕಿದೆ. ಏಕೆಂದರೆ ಅವರು ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಅರ್ಥ ಬರುವ ರೀತಿಯಲ್ಲಿ ಸಿಧು ಅವರು ಚನ್ನಿ ಅವರತ್ತ ಕೈತೋರಿದ್ದರು.

ಚನ್ನಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ತಮ್ಮ ಕ್ಷೇತ್ರದ ಹೊರಗೆ ಹೆಚ್ಚಿನ ರ‍್ಯಾಲಿಯಲ್ಲಿ ಸಿಧು ಭಾಗವಹಿಸಿಲ್ಲ. ಆದರೆ, ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಮತ್ತು ಪ್ರಿಯಾಂಕಾ ಅವರು ಭಾಗವಹಿಸಿದ ಸಮಾರಂಭಗಳಿಗೆ ಹಾಜರಾಗಿದ್ದಾರೆ. ಎಲ್ಲಿ ಪ್ರಚಾರ ಮಾಡಬೇಕು ಎಂದು ಹೈಕಮಾಂಡ್‌ ಹೇಳುತ್ತದೆಯೋ ಅಲ್ಲೆಲ್ಲ ಪ್ರಚಾರ ಮಾಡುವುದಾಗಿ ಸಿಧು ಹೇಳಿಕೊಳ್ಳುತ್ತಿದ್ದಾರೆ.

ಹೊಣೆಯಿಂದ ನುಣುಚುವ ಯತ್ನ

ಪಂಜಾಬ್‌ ಚುನಾವಣಾ ಕಣವು ದಿನ ಕಳೆದಂತೆ ಸಂಕೀರ್ಣಗೊಳ್ಳುತ್ತಿದೆ. ಸಾಂಪ್ರದಾಯಿಕವಾದ ನೇರ ಹಣಾಹಣಿ ನಿಧಾನಕ್ಕೆ ಮರೆಯಾಗುತ್ತಿದೆ. ಬಹುಕೋನ ಸ್ಪರ್ಧೆ ಕಾಣಿಸುತ್ತಿದೆ. ಐದು ಪ್ರಮುಖ ಪಕ್ಷಗಳು ಗೆಲುವಿಗೆ ತೀವ್ರವಾಗಿ ಶ್ರಮಿಸುತ್ತಿವೆ. ‘ಸಿಧು ಅವರು ಈ ಹಿಂದಿನಂತೆ ಬಿರುಸಿನಿಂದ ಪ್ರಚಾರ ಮಾಡುತ್ತಿಲ್ಲ. ಚುನಾವಣೆಯಲ್ಲಿ ಪಕ್ಷವು ಗೆಲ್ಲದಿದ್ದರೆ ಅದರ ಹೊಣೆಯನ್ನು ತಾವು ಹೊರಬೇಕಾಗಬಹುದು ಎಂಬುದು ಇದಕ್ಕೆ ಒಂದು ಕಾರಣ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ ಪಕ್ಷವು ಪಂಜಾಬ್‌ನಲ್ಲಿ ಗೆಲ್ಲಬೇಕಿದ್ದರೆ ಸಿಧು ಅವರ ಕೊಡುಗೆ ಕಾಂಗ್ರೆಸ್‌ಗೆ ಬೇಕೇಬೇಕು. ಆದರೆ, ಗೆಲ್ಲುವಲ್ಲಿ ಪಕ್ಷವು ವಿಫಲವಾದರೆ, ಅದರ ಹೊಣೆಯನ್ನು ಚನ್ನಿ ಅವರ ತಲೆಗೆ ಕಟ್ಟಬಹುದು ಎಂಬ ಲೆಕ್ಕಾಚಾರವೂ ಸಿಧು ಅವರಲ್ಲಿ ಇದೆ.

ಚನ್ನಿ ಅವರಿಗೂ ಕಳೆದುಕೊಳ್ಳೂವುದಕ್ಕೆ ಹೆಚ್ಚೇನೂ ಇಲ್ಲ. ಏಕೆಂದರೆ ಮುಖ್ಯಮಂತ್ರಿ ಹುದ್ದೆಗೆ ಅವರು ಏರಿದ್ದೇ ಆಕಸ್ಮಿಕ. ದಲಿತ ಹಿನ್ನೆಲೆಯು ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲು ಕಾರಣವಾಗಿತ್ತು. ಜತೆಗೆ, ಅವರು ಅಧಿಕಾರದಲ್ಲಿ ಇದ್ದ ಅವಧಿಯು ಕೆಲವೇ ತಿಂಗಳು ಮಾತ್ರ. ತಮ್ಮ ಸರ್ಕಾರದ ಸಾಧನೆ ನೋಡಿ ಮತ ಕೊಡಿ ಎಂದು ಚನ್ನಿ ಅವರು ಕೇಳುವುದು ಸಾಧ್ಯವಿಲ್ಲ. ಹಾಗಾಗಿ, ಪಕ್ಷ ಸೋತರೆ ಅದರ ಹೊಣೆಯಿಂದ ಚನ್ನಿ ಅವರು ತಪ್ಪಿಸಿಕೊಳ್ಳಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.