ಚಂಡೀಗಢ: ದೆಹಲಿ ಮುಖ್ಯಮಂತ್ರಿ ಆತಿಶಿ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಪೊಲೀಸರು ಮತ್ತು ಚುನಾವಣಾ ಆಯೋಗದ ಕೆಲಸ ಕೇವಲ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಗುರಿ ಮಾಡುವುದೇ ಆಗಿದೆಯೇ? ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾನ್, ದೆಹಲಿಯಲ್ಲಿ ಬಿಜೆಪಿ ನಡೆಸುತ್ತಿರುವ ಗೂಂಡಾಗಿರಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಚುನಾವಣಾ ಆಯೋಗ ಸಲ್ಲಿಸಿದ ದೂರಿನ ಮೇರೆಗೆ ಆತಿಶಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, 'ಇದು ಅತ್ಯಂತ ಖಂಡನೀಯ' ಎಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಪೊಲೀಸರು ಮತ್ತು ಚುನಾವಣಾ ಆಯೋಗವು ಕೆಲಸ ಕೇವಲ ಎಎಪಿ ಪಕ್ಷವನ್ನು ಗುರಿಯಾಗಿಸುವುದೇ? ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಮದ್ಯ, ಹಣ ಮತ್ತು ವಸ್ತುಗಳನ್ನು ವಿತರಿಸುತ್ತಿದ್ದಾರೆ. ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿಲ್ಲವೇ?, ಇದು ( ಚುನಾವಣಾ ಆಯೋಗ) ಕಾಣಿಸುತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಮತ್ತು ಕರ್ತವ್ಯದಲ್ಲಿರುವ ಸರ್ಕಾರಿ ನೌಕರರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಎಎಪಿ ಅಭ್ಯರ್ಥಿ ಹಾಗೂ ದೆಹಲಿ ಸಿಎಂ ಆತಿಶಿ ವಿರುದ್ಧ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ, ಫತೇ ಸಿಂಗ್ ಮಾರ್ಗದಲ್ಲಿ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸದಂತೆ ಆತಿಶಿ ಮತ್ತು ಎಎಪಿ ಬೆಂಬಲಿಗರು ಅಡ್ದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.