ADVERTISEMENT

ಪಂಜಾಬ್: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಮನ್‌ಪ್ರೀತ್ ಬಾದಲ್

ಪಿಟಿಐ
Published 18 ಜನವರಿ 2023, 11:36 IST
Last Updated 18 ಜನವರಿ 2023, 11:36 IST
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮನ್‌ಪ್ರೀತ್‌ ಸಿಂಗ್ ಬಾದಲ್ ಅವರನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು –ಪಿಟಿಐ ಚಿತ್ರ 
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮನ್‌ಪ್ರೀತ್‌ ಸಿಂಗ್ ಬಾದಲ್ ಅವರನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು –ಪಿಟಿಐ ಚಿತ್ರ    

ನವದೆಹಲಿ: ಪಂಜಾಬ್‌ನ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್‌ ಸಿಂಗ್ ಬಾದಲ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದು, ಹೊಸ ಪಕ್ಷದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸುವ ಮುನ್ನವೇ ಈ ಹಿಂದೆ ಇದ್ದ ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯನ್ನು ಟೀಕಿಸಿದ್ದಾರೆ.

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಮನ್‌ಪ್ರೀತ್, ‘ಮೋದಿ ಅವರ ಸುಮಾರು ಒಂಬತ್ತು ವರ್ಷಗಳ ಆಡಳಿತದಲ್ಲಿ ಭಾರತವು ರಾಜತಾಂತ್ರಿಕವಾಗಿ ಮತ್ತು ಆರ್ಥಿಕವಾಗಿಯೂ ಸೇರಿದಂತೆ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ’ ಎಂದು ಹೇಳಿದ್ದಾರೆ.

‍ಪಂಜಾಬ್‌ನ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಬಿಜೆಪಿಗೆ ಮಾತ್ರ ಇದೆ ಎಂದೂ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ಅನ್ನು ತೊರೆದ ಕಾರಣವನ್ನು ವಿವರಿಸಿದ ಅವರು, ‘ತನ್ನಲ್ಲೇ ಹೋರಾಟ ಮಾಡುತ್ತಿರುವ ಒಂದು ಪಕ್ಷವು ಹೇಗೆ ಕಾರ್ಯನಿರ್ವಹಿಸಬಲ್ಲದು? ಪಂಜಾಬ್ ಮಾತ್ರವಲ್ಲ. ಇತರ ರಾಜ್ಯಗಳಲ್ಲೂ ಕಾಂಗ್ರೆಸ್ ಬಣಗಳಿಂದ ತುಂಬಿ ಹೋಗಿದೆ’ ಎಂದಿದ್ದಾರೆ.

ನವದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮನ್‌ಪ್ರೀತ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೇಂದ್ರ ಸಚಿವ ಪೀಯೂಷ್ ಗೋಯಲ್, ‘ಮನ್‌ಪ್ರೀತ್ ಬಾದಲ್ ಅವರು ವಿದ್ವಾಂಸ, ಸರಳ ಮತ್ತು ಅನುಭವಿ ನಾಯಕರಾಗಿದ್ದಾರೆ. ಅವರು ಬಿಜೆಪಿಗೆ ಸೇರುವುದರಿಂದ ಸಿಖ್ಖರೊಂದಿಗಿನ ಪಕ್ಷದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಸೇರ್ಪಡೆಗೂ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಮನ್‌ಪ್ರೀತ್, ಪಕ್ಷದಲ್ಲಿನ ಗುಂಪುಗಾರಿಕೆಯಿಂದ ತಾವು ಭ್ರಮನಿರಸನಗೊಂಡಿರುವುದಾಗಿ ತಿಳಿಸಿದ್ದಾರೆ.

‘ಪಕ್ಷದಲ್ಲಿ ನನಗೆ ಅವಕಾಶಗಳನ್ನು ಒದಗಿಸಿದ್ದಕ್ಕಾಗಿ ಮತ್ತು ಈ ಹಿಂದೆ ನೀವು ನನ್ನ ಬಗ್ಗೆ ತೋರಿದ ದಯೆ ಹಾಗೂ ಸೌಜನ್ಯಕ್ಕಾಗಿ ಧನ್ಯವಾದಗಳು’ ಎಂದೂ ಅವರು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.