ADVERTISEMENT

ಪಂಜಾಬ್‌: ಗುಂಡು ಹಾರಿಸಿ ಸಹಪಾಠಿ ಕೊಂದ ಕಾನೂನು ವಿದ್ಯಾರ್ಥಿ

ಪಿಟಿಐ
Published 9 ಫೆಬ್ರುವರಿ 2026, 13:34 IST
Last Updated 9 ಫೆಬ್ರುವರಿ 2026, 13:34 IST
   

ಚಂಡೀಗಢ: ಪಂಜಾಬ್‌ನ ತರನ್ ತಾರನ್‌ ಜಿಲ್ಲೆಯ ಉಸ್ಮಾ ಗ್ರಾಮದ ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ತರಗತಿ ಒಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ನಂತರ, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಂದೀಪ್‌ ಕೌರ್‌ ಕೊಲೆಯಾದ ವಿದ್ಯಾರ್ಥಿನಿ. ಪ್ರಿನ್ಸ್‌ರಾಜ್‌ ಈ ಕೃತ್ಯವೆಸಗಿರುವ ವಿದ್ಯಾರ್ಥಿ.

ಮಲಿಯನ್‌ ಗ್ರಾಮದ ಪ್ರಿನ್ಸ್‌ರಾಜ್‌ ಹಾಗೂ ನೌಶೆಹರಾ ಪನ್ನುವಾನ್‌ ಗ್ರಾಮದ ಸಂದೀಪ್‌ ಕೌರ್‌ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದು, 19–20 ವರ್ಷದವರು.

ADVERTISEMENT

‘ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಿನ್ಸ್‌ ರಾಜ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶವನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ’ ಎಂದು ಡಿಎಸ್‌ಪಿ ಜಗ್ಬೀರ್‌ ಸಿಂಗ್‌ ತಿಳಿಸಿದ್ದಾರೆ.

ಕಾಲೇಜು ಆವರಣದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕೊಲೆ ದೃಶ್ಯ ಸೆರೆಯಾಗಿದೆ. ಸೋಮವಾರ ಬೆಳಿಗ್ಗೆ ಪ್ರಿನ್ಸ್‌ರಾಜ್‌, ಸಂದೀಪ್‌ ಕೌರ್‌ ಮತ್ತು ಇನ್ನೊಬ್ಬ ವಿದ್ಯಾರ್ಥಿನಿ ತರಗತಿಯಲ್ಲಿ ಒಟ್ಟಿಗೆ ಕುಳಿತಿದ್ದರು. ಇದ್ದಕ್ಕಿದ್ದಂತೆ, ಪ್ರಿನ್ಸ್‌ರಾಜ್‌ ತನ್ನ ಮೇಜಿನಿಂದ ಎದ್ದು ಸಂದೀಪ್‌ ಕೌರ್‌ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ತಾನೂ ತಲೆಗೆ ಗುಂಡು ಹಾರಿಸಿಕೊಂಡಿದ್ದು, ನೆಲದ ಮೇಲೆ ಬಿದ್ದಿದ್ದಾನೆ.

ಸಂದೀಪ್‌ ಕೌರ್‌ ಜೊತೆ ಕುಳಿತಿದ್ದ ವಿದ್ಯಾರ್ಥಿನಿಯರು ಆಘಾತಕ್ಕೊಳಗಾಗಿ ಪರೀಕ್ಷಿಸಿದರು. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಗುಂಡು ಹಾರಿದ ಶಬ್ದ ಕೇಳಿ ಕೆಲವು ವಿದ್ಯಾರ್ಥಿಗಳು ತರಗತಿಯೊಳಗೆ ಪ್ರವೇಶಿಸಿದರು. ಸಂದೀಪ್‌ ಕೌರ್‌ ಅವರನ್ನು ನೋಡಿದ ಕೂಡಲೇ ಅಲ್ಲಿಂದ ಓಡಿ ಹೋದರು.

‘ಕಾಲೇಜಿಗೆ ತಕ್ಷಣ ಬರುವಂತೆ ಆಡಳಿತ ಮಂಡಳಿಯವರು ಮೊಬೈಲ್‌ ಕರೆ ಮಾಡಿ ಹೇಳಿದರು. ಮಗಳಿಗೆ ಗುಂಡು ಹಾರಿಸಿರುವ ವಿಷಯ ತಿಳಿಸಿರಲಿಲ್ಲ. ಕಾಲೇಜಿಗೆ ಬಂದು ನೋಡಿದಾಗ ಮಗಳು ಶವವಾಗಿ ಬಿದ್ದಿದ್ದಳು’ ಎಂದು ಸಂದೀಪ್ ಅವರ ತಾಯಿ ಹರ್ಜಿಂದರ್‌ ಕೌರ್‌ ಕಣ್ಣೀರಿಟ್ಟಿದ್ದಾರೆ.

‘ವಿದ್ಯಾರ್ಥಿಯು ಬಂದೂಕಿನೊಂದಿಗೆ ಕಾಲೇಜಿಗೆ ಪ್ರವೇಶಿಸಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.