ADVERTISEMENT

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್-19 ಲಸಿಕೆ ಕೊರತೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 15:57 IST
Last Updated 10 ಏಪ್ರಿಲ್ 2021, 15:57 IST
   

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಸರ್ಕಾರವಿರುವ ಪಂಜಾಬ್‌, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳುಕೋವಿಡ್-19 ಲಸಿಕೆ ಪೂರೈಕೆ ಕೊರತೆಯಿದೆ ಎಂದು ಹೇಳಿಕೊಂಡಿವೆ.ಒಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳೂ ಹೆಚ್ಚಿನ ಲಸಿಕೆ ಒದಗಿಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿವೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು, ತಮ್ಮ‌ ಪಕ್ಷ ಆಡಳಿತದಲ್ಲಿರುವ ಮತ್ತು ಆಡಳಿತದಲ್ಲಿರುವ ಬೇರೆಪಕ್ಷಗಳನ್ನು ಬೆಂಬಲಿಸಿರುವರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವರ್ಚುವಲ್‌ ಸಭೆ ನಡೆಸಿದರು.

ಈ ವೇಳೆ ಮಾತನಾಡಿದಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು, ʼಇನ್ನು ಐದು ದಿನಗಳಿಗೆ ಸಾಕಾಗುವಷ್ಟು ಲಸಿಕೆ (5.7 ಲಕ್ಷ ಡೋಸ್‌) ರಾಜ್ಯದಲ್ಲಿ ಇದೆ. ನಿತ್ಯ 85000-90000 ಜನರಿಗೆ ಲಸಿಕ ನೀಡಲಾಗುತ್ತಿದೆ. ರಾಜ್ಯವು2 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ತಲುಪಲು ಸಾಧ್ಯವಾದರೆ, ಸದ್ಯ ಇರುವ ಲಸಿಕೆ ಮೂರು ದಿನಗಳಲ್ಲಿ ಮುಗಿಯುತ್ತದೆʼ ಎಂದು ಹೇಳಿದ್ದಾರೆ.ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿರುವುದಾಗಿಯೂ ಅವರು ತಿಳಿಸಿದ್ದಾರೆ.

ADVERTISEMENT

ಸಭೆ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಲಸಿಕೆ ಕೊರತೆ ವಾಸ್ತವವಾಗಿದೆ. ಕೇಂದ್ರ ಸರ್ಕಾರವು ರಾಜ್ಯಗಳನ್ನು ಮಧ್ಯಸ್ಥಗಾರರನ್ನಾಗಿ ತೆಗೆದುಕೊಳ್ಳಬೇಕೇ ಹೊರತು ವಿರೋಧಿಗಳನ್ನಾಗಿ ನೋಡಬಾರದು ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರಗಳು ಗರಿಷ್ಠ ಸಂಖ್ಯೆಯಲ್ಲಿ ಜನರಿಗೆ ಲಸಿಕೆ ವಿತರಿಸಲು ಗುರಿ ಇಟ್ಟುಕೊಂಡಿವೆ. ರಾಜ್ಯದಲ್ಲಿರುವ ಲಸಿಕೆಯು ಇನ್ನೆರಡು ದಿನಗಳಲ್ಲಿ ಮುಗಿಯಲಿದ್ದು, ಮತ್ತಷ್ಟು ಪೂರೈಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.

ಒಡಿಶಾ ಮುಖ್ಯಮಂತ್ರಿ ಬಿಜಯ್‌ ಪಣಿಗ್ರಹಿ ಮತ್ತು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೂ ಇನ್ನೆರಡು ದಿನಗಳಿಗೆ ಆಗುವಷ್ಟು ಲಸಿಕೆ ಮಾತ್ರವೇ ರಾಜ್ಯದಲ್ಲಿದೆ ಎಂದಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್‌ ಜಗನ್‌ಮೋಹನ್‌ ರೆಡ್ಡಿ ಅವರು25 ಲಕ್ಷ ಡೋಸ್‌ನಷ್ಟು ಲಸಿಕೆ ಪೂರೈಸುವಂತೆ ಪ್ರಧಾನಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಆರೋಗ್ಯ ಸಚಿವರೂ ಲಸಿಕೆ ಕೊರತೆಯ ಬಗ್ಗೆ ವಿವರಿಸಿದ್ದಾರೆ. ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ಟೋಪ್, ಕೇಂದ್ರವು ಪ್ರತಿವಾರ‌ 40 ಲಕ್ಷ ಡೋಸ್‌ ಲಸಿಕೆ ಪೂರೈಸಬೇಕು ಎಂದು ಕೋರಿದ್ದಾರೆ.

ಭಾರತದಲ್ಲಿಜನವರಿ 16 ರಂದು ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಮಾರ್ಚ್‌ 1 ರಂದು ಎರಡನೇ ಹಂತ ಮತ್ತು ಏಪ್ರಿಲ್‌ 1 ರಂದು ಮೂರನೇ ಹಂತದಲ್ಲಿ45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.