ಪುರಿಯಲ್ಲಿ ರಥಯಾತ್ರೆ ಸಂಭ್ರಮ
(ಪಿಟಿಐ ಚಿತ್ರ)
ಪುರಿ: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲದ ಸಮೀಪ ಇಂದು (ಭಾನುವಾರ) ಸಂಭವಿಸಿದ ಕಾಲ್ತುಳಿತ ಅವಘಡಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಕ್ತರ ಕ್ಷಮೆಯಾಚಿಸಿದ್ದಾರೆ.
ಇಂದು ಮುಂಜಾನೆ ಗುಂಡಿಚ ದೇಗುಲದ ಬಳಿ ನಡೆದ ಕಾಲ್ತುಳಿತ ಅವಘಡದಲ್ಲಿ ಮೂವರು ಮೃತಪಟ್ಟು, ಸುಮಾರು 50 ಮಂದಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ರಥಯಾತ್ರೆ ನೋಡಲು ನೂರಾರು ಭಕ್ತರು ದೇಗುಲದ ಬಳಿ ಜಮಾಯಿಸಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
'ಸರ್ಕಾರದ ಪರವಾಗಿ ನಾನು ಜಗನ್ನಾಥ ದೇವರ ಭಕ್ತರಲ್ಲಿ ಕ್ಷಮೆಯಾಚಿಸುತ್ತೇನೆ. ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಈ ಕಠಿಣ ಸಂದರ್ಭದಲ್ಲಿ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.
'ಕಾಲ್ತುಳಿತದಲ್ಲಿ ಭದ್ರತಾ ಲೋಪ ಉಂಟಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಯಾರಾದರೂ ತಪ್ಪಿಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಭರವಸೆ ನೀಡಿದ್ದಾರೆ.
'ಈ ನಿರ್ಲಕ್ಷ್ಯವನ್ನು ಕ್ಷಮಿಸಲಾಗದು. ಭದ್ರತಾ ಲೋಪದ ಕುರಿತು ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.