ADVERTISEMENT

ಮುಸ್ಲಿಂ ಬಹುಸಂಖ್ಯಾತ ಪ್ರದೇಶ: ಪಾಳುಬಿದ್ದಿದ್ದ ಶಿವ ದೇಗುಲದಲ್ಲಿ ಶುದ್ಧೀಕರಣ

ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದೇವಾಲಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 13:39 IST
Last Updated 19 ಡಿಸೆಂಬರ್ 2024, 13:39 IST
.
.   

ಅಲಿಗಢ (ಉತ್ತರ ಪ್ರದೇಶ) (ಪಿಟಿಐ): ಇಲ್ಲಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳುಬಿದ್ದಿದ್ದ ಶಿವ ದೇವಾಲಯವನ್ನು ಬಲಪಂಥೀಯ ಸಂಘಟನೆಗಳ ಮುಖಂಡರು, ಕೆಲ ಸ್ಥಳೀಯ ಬಿಜೆಪಿ ನಾಯಕರು ಪುನಃ ತೆರೆದು, ಶುದ್ಧೀಕರಣ ಕಾರ್ಯಗಳನ್ನು ನೆರವೇರಿಸಿ ಹನುಮಾನ್‌ ಚಾಲೀಸ ಪಠಿಸಿದರು.

ಬಜರಂಗದಳ ಮತ್ತು ಅಖಿಲ ಭಾರತ ಕರ್ಣಿ ಸೇನಾ ಗುಂಪುಗಳು ಈ ಕಾರ್ಯಕ್ರಮ ಆಯೋಜಿಸಿದ್ದವು. ಕೆಲ ಸ್ಥಳೀಯರೂ ಇದರಲ್ಲಿ ಭಾಗಿಯಾಗಿದ್ದರು. ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

‘ಪೂಜಾ ಸ್ಥಳಗಳನ್ನು ಶೋಧಿಸುವ ವೇಳೆ ನಮ್ಮ ಸಂಘಟನೆಯ ಸದಸ್ಯರು ಈ ಶಿವ ಮಂದಿರವನ್ನು ಬುಧವಾರ ಗುರುತಿಸಿದರು’ ಎಂದು ಅಖಿಲ ಭಾರತ ಕರ್ಣಿ ಸೇನಾದ ರಾಜ್ಯ ಕಾರ್ಯದರ್ಶಿ ಜ್ಞಾನೆಂದ್ರ ಸಿಂಗ್‌ ಚೌಹಾಣ್‌ ತಿಳಿಸಿದರು.

ADVERTISEMENT

ನಿರ್ವಹಣೆಯಿಲ್ಲದೆ ಸೊರಗಿದ್ದ ದೇವಾಲಯದ ಸ್ಥಿತಿ ಬಗ್ಗೆ ಅಲಿಗಢದ ಮಾಜಿ ಮೇಯರ್‌, ಬಿಜೆಪಿಯ ನಾಯಕರಾದ ಶಕುಂತಲಾ ಭಾರತಿ ಕಳವಳ ವ್ಯಕ್ತಪಡಿಸಿದರು.

‘ಈ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಅದರ ಜಾಗ ಒತ್ತುವರಿಯಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಈ ಕುರಿತು ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.

‘ಒತ್ತುವರಿಯನ್ನು ತೆರವುಗೊಳಿಸಿ, ದೇಗುಲದಲ್ಲಿ ನಿಯಮಿತವಾಗಿ ಪೂಜಾ ಕಾರ್ಯಗಳು ನಡೆಯುವಂತೆ ಆಗಬೇಕು. ಅಲ್ಲದೆ ದೇವಾಲಯದ ಸುತ್ತಲಿನ ಜಾಗದ ಸಮೀಕ್ಷೆ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ’ ಎಂದು ಅವರು ತಿಳಿಸಿದರು.

ದೇಗುಲಕ್ಕೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸ್ಥಳೀಯ ನಿವಾಸಿ ಫತೇ ಮೊಹಮ್ಮದ್‌ ಎಂಬುವರು ನೆರವಾದರು. ಅವರ ಪ್ರಕಾರ, ಈ ದೇವಾಲಯ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸುಮಾರು ಐದು ವರ್ಷಗಳ ಹಿಂದಿನಿಂದ ದೇವಾಲಯದಲ್ಲಿ ಪೂಜಾ ಕಾರ್ಯಗಳು ನಿಂತಿವೆ.

‘ದೇವಾಲಯದ ಜೀರ್ಣೋದ್ಧಾರವನ್ನು ನಾವು ಬೆಂಬಲಿಸುತ್ತೇವೆ ಮತ್ತು ನಿರ್ವಹಣೆಗೆ ನೆರವು ನೀಡುತ್ತೇವೆ’ ಎಂದು ಮೊಹಮ್ಮದ್‌ ಪ್ರತಿಕ್ರಿಯಿಸಿದರು.

‘ಈ ಭಾಗದಲ್ಲಿನ ಜನದಟ್ಟಣೆ ಹೆಚ್ಚಾದ್ದರಿಂದ ಮತ್ತು ಮೂಲ ಸೌಕರ್ಯದ ಕೊರತೆ ಕಾರಣ ಕೆಲ ದಶಕಗಳಿಂದ ಹಿಂದೂಗಳು ಬೇರೆಡೆಗೆ ಸ್ಥಳಾಂತರವಾಗಿದ್ದಾರೆ. ಇಲ್ಲಿದ್ದ ಕೊನೆಯ ಹಿಂದೂ ಕುಟುಂಬ ನಮ್ಮದು. ನಮ್ಮ ಕುಟುಂಬ ಸಹ ದಶಕದ ಹಿಂದೆ ಇಲ್ಲಿಂದ ಸ್ಥಳಾಂತರವಾಯಿತು. ಐದು ವರ್ಷಗಳಿಂದ ಈ ದೇವಾಲಯದಲ್ಲಿ ಯಾವುದೇ ಪೂಜೆ ನಡೆದಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರದೀಪ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.