ADVERTISEMENT

ಭಾರತದೊಂದಿಗೆ ವ್ಯಾಪಾರ– ಅಸಮತೋಲನ ಸರಿಪಡಿಸಿ: ತನ್ನ ಅಧಿಕಾರಿಗಳಿಗೆ ಪುಟಿನ್ ಆದೇಶ

ಅಧಿಕಾರಿಗಳಿಗೆ ಆದೇಶ ನೀಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 16:04 IST
Last Updated 3 ಅಕ್ಟೋಬರ್ 2025, 16:04 IST
ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅಧ್ಯಕ್ಷ ವ್ಲಾದಿಮರ್‌ ಪುಟಿನ್–ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅಧ್ಯಕ್ಷ ವ್ಲಾದಿಮರ್‌ ಪುಟಿನ್–ಪಿಟಿಐ ಚಿತ್ರ   

ಮಾಸ್ಕೊ: ಅಧಿಕ ಪ್ರಮಾಣದ ಕಚ್ಚಾತೈಲ ಖರೀದಿಸುತ್ತಿರುವ ಭಾರತದೊಂದಿಗೆ ವ್ಯಾಪಾರ ಅಸಮೋತಲನ ನಿವಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಹಾಗೂ ಔಷಧವನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ತನ್ನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇದೇ ಡಿಸೆಂಬರ್‌ನಲ್ಲಿ ನಡೆಯುವ ವಾರ್ಷಿಕ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಪುಟಿನ್‌ ಈ ಘೋಷಣೆ ಮಾಡಿದ್ದಾರೆ.

ರಷ್ಯಾ ದಕ್ಷಿಣ ಭಾಗದ ಸೋಚಿ ಪಟ್ಟಣದಲ್ಲಿರುವ ‘ಬ್ಲ್ಯಾಕ್‌ ಸೀ’ ರೆಸಾರ್ಟ್‌ನಲ್ಲಿ ಗುರುವಾರ ತಡರಾತ್ರಿ ನಡೆದ ಭಾರತ ಸೇರಿದಂತೆ 140 ದೇಶದ ಭದ್ರತೆ ಹಾಗೂ ಭೌಗೋಳಿಕ ರಾಜಕೀಯ ತಜ್ಞರನ್ನು ಒಳಗೊಂಡ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ADVERTISEMENT

‘ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕವು ಹೆಚ್ಚಿನ ಸುಂಕ ಹೇರಿದ್ದರಿಂದ ಉಂಟಾದ ನಷ್ಟಕ್ಕೆ ಪ್ರತಿಯಾಗಿ ಅಲ್ಲಿಂದ ಹೆಚ್ಚಿನ ವಸ್ತುಗಳನ್ನು ಖರೀದಿಸುವ ಮೂಲಕ ಸಮತೋಲನಗೊಳಿಸಲಾಗುತ್ತದೆ. ಆ ಮೂಲಕ ಸಾರ್ವಭೌಮ ರಾಷ್ಟ್ರ ಪ್ರತಿಷ್ಠೆಯೂ ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ.

ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕವು ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತಿದ್ದು, ಶೇಕಡಾ 50ರಷ್ಟು ತೆರಿಗೆ ವಿಧಿಸಿದಂತಾಗಿದೆ. ಇದರಿಂದ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. 

ಈ ವಿಚಾರವನ್ನು ಉಲ್ಲೇಖಿಸಿದ ಪುಟಿನ್‌, ‘ವ್ಯಾಪಾರ ಅಸಮತೋಲನ ತೆಗೆದುಹಾಕುವ ನಿಟ್ಟಿನಲ್ಲಿ ಭಾರತದ ಕೃಷಿ, ಔಷಧಗಳನ್ನು ಹೆಚ್ಚಿನ ಸಂಖ್ಯೆಯನ್ನು ಖರೀದಿಸಲಾಗುತ್ತದೆ. ಔಷಧ, ಔಷಧ ಉತ್ಪನ್ನಗಳ ವಿಚಾರದಲ್ಲಿ ನಮ್ಮ ಕಡೆಯಿಂದ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದ್ದಾರೆ.

‘ಮೋದಿ ಸಮತೋಲಿತ ಬುದ್ಧಿವಂತ ನಾಯಕ’

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವನ್ನು ಶ್ಲಾಘಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು (ಮೋದಿ) ಸಮತೋಲಿತ ಬುದ್ಧಿವಂತ ಹಾಗೂ ರಾಷ್ಟ್ರೀಯವಾದಿ ನಾಯಕ ಎಂದು ಬಣ್ಣಿಸಿದರು. ‘ಅಮೆರಿಕ ಸುಂಕ ಹೇರಿಕೆ ಬೆದರಿಕೆಗೆ ಪ್ರತಿಕ್ರಿಯಿಸಿದ ಅವರು ದೇಶದ ಹಿತಾಸಕ್ತಿ ಹಾಗೂ ಆದ್ಯತೆಗಳಿಗೆ ವಿರುದ್ಧವಾದ ಯಾವುದೇ ಕಾರ್ಯತಂತ್ರವನ್ನು ಭಾರತೀಯರು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ ಎಂದು ಆರ್‌ಟಿ ನ್ಯೂಸ್‌ ಚಾನಲ್‌ ತಿಳಿಸಿದ್ದಾರೆ. ಭಾರತವು ತನ್ನನ್ನು ಯಾರಿಂದಲೂ ಅವಮಾನಿಸಲು ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಏನು ಎಂಬುದು ನನಗೆ ಗೊತ್ತಿದೆ. ಅವರೂ ಎಂದಿಗೂ ಇಂತಹ ನಿರ್ಧಾರ ತೆಗೆದುಕೊಳ್ಳಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.