ADVERTISEMENT

ಭಾರತದ ವಾಯು ರಕ್ಷಣಾ ವ್ಯವಸ್ಥೆ ಬಲವರ್ಧನೆ: ಶಸ್ತ್ರಾಸ್ತ್ರ ಖರೀದಿಗೆ ₹30,000 ಕೋಟಿ

ಏಜೆನ್ಸೀಸ್
Published 9 ಜೂನ್ 2025, 14:56 IST
Last Updated 9 ಜೂನ್ 2025, 14:56 IST
<div class="paragraphs"><p>ಆಕಾಶ್-ಎನ್‌ಜಿ ಕ್ಷಿಪಣಿ ಯಶಸ್ವಿ ಪ್ರಯೋಗ (ಸಂಗ್ರಹ ಚಿತ್ರ)</p></div>

ಆಕಾಶ್-ಎನ್‌ಜಿ ಕ್ಷಿಪಣಿ ಯಶಸ್ವಿ ಪ್ರಯೋಗ (ಸಂಗ್ರಹ ಚಿತ್ರ)

   

(ಪಿಟಿಐ ಚಿತ್ರ)

ನವದೆಹಲಿ: ಇತ್ತೀಚೆಗೆ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನದ ಯುದ್ಧ ವಿಮಾನ, ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಯತ್ನವನ್ನು ತಕ್ಕ ಉತ್ತರದೊಂದಿಗೆ ಸಮರ್ಥವಾಗಿ ಎದುರಿಸಿದ ಬೆನ್ನಲ್ಲೇ, ಭಾರತೀಯ ವಾಯು ರಕ್ಷಣಾ ಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವತ್ತ ರಕ್ಷಣಾ ಇಲಾಖೆ ಹೆಜ್ಜೆ ಇಟ್ಟಿದೆ.

ADVERTISEMENT

ಅತ್ಯಾಧುನಿಕ ಖಂಡಾಂತರ ಕ್ಷಿಪಣಿಯ ಖರೀದಿ ಮೂಲಕ ಭಾರತೀಯ ಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯು ₹30 ಸಾವಿರ ಕೋಟಿ ಮೊತ್ತದ ಕ್ಷಿಪಣಿ ವ್ಯವಸ್ಥೆ ಖರೀದಿಗೆ ಮುಂದಾಗಿದೆ.

ದೇಶದ ಪಶ್ಚಿಮ ಹಾಗೂ ಉತ್ತರದ ಗಡಿ ಭಾಗದಲ್ಲಿ ತ್ವರಿತವಾಗಿ ಕಾರ್ಯಪ್ರತ್ತರಾಗುವ ಸೇನೆಯ ವಾಯು ರಕ್ಷಣೆಯ ಮೂರು ತುಕಡಿಗಳಿಗೆ ತ್ವರಿತವಾಗಿ ಪ್ರಹಾರ ನಡೆಸುವ ಖಂಡಾಂತರ ಕ್ಷಿಪಣಿ (QRSAM) ಖರೀದಿಸುವ ಪ್ರಸ್ತಾವನೆಯನ್ನು ಶೀಘ್ರದಲ್ಲಿ ರಕ್ಷಣಾ ಇಲಾಖೆ ಪೂರ್ಣಗೊಳಿಸಲಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಇಲಾಖೆ ಮುಂದಾಗಿದೆ. ಗುರಿ ಮತ್ತದರ ಮಾರ್ಗವನ್ನು ತ್ವರಿತವಾಗಿ ಪತ್ತೆ ಮಾಡುವ ಸಾಮರ್ಥ್ಯವಿರುವ ಈ ರಕ್ಷಣಾ ಸಾಧನವು ಶತ್ರುಗಳ ದಾಳಿಯನ್ನು ತ್ವರಿತವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಹಾಲಿ ಇರುವ ಎಂಆರ್‌ಎಸ್‌ಎಂ ಮತ್ತು ಆಕಾಶ್‌ಗಿಂತ ಸುಧಾರಿತ ಸಾಧನ ಇದಾಗಿದ್ದು, 30 ಕಿ.ಮೀ. ಅಂತರದಲ್ಲೇ ಶತ್ರುಗಳ ಕ್ಷಿಪಣಿ ದಾಳಿಯನ್ನು ನಿಷ್ಕ್ರಿಯಗೊಳಿಸಲಿದೆ. ಪರೀಕ್ಷಾರ್ಥ ಪ್ರಯೋಗ ಸಂದರ್ಭದಲ್ಲಿ ರಾತ್ರಿ ಮತ್ತು ಹಗಲು ಎರಡೂ ಕಾಲಮಾನಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ.

ಇತ್ತೀಚೆಗೆ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನವು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. ಇವುಗಳಲ್ಲಿ ಬಹುತೇಕ ಕ್ಷಿಪಣಿಗಳನ್ನು ಭಾರತೀಯ ಸೇನೆಯ ಎಲ್‌–70 ಮತ್ತು ಝಡ್‌ಯು–23 ವಾಯು ರಕ್ಷಣಾ ಬಂದೂಕುಗಳನ್ನು ಬಳಸಿ ನಾಶಪಡಿಸಿದವು. ಯುದ್ಧದಲ್ಲಿ ಆಕಾಶ್ ಮತ್ತು ಎಂಆರ್‌ಎಸ್‌ಎಎಂ ಪ್ರಮುಖ ಪಾತ್ರ ವಹಿಸಿದವು. ಭಾರತೀಯ ವಾಯು ಸೇನೆಯು ಸ್ಪೈಡರ್‌ಡಬ್ಲೂಆರ್‌ ಮತ್ತು ಸುದರ್ಶನ ಎಸ್‌–400 ವಾಯು ರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡಿತು.

ಸೇನಾ ವಾಯು ರಕ್ಷಣಾ ವ್ಯವಸ್ಥೆಯು ಹೊಸ ರಾಡಾರ್‌, ಜಾಮರ್‌ನೊಂದಿಗೆ ಕಡಿಮೆ ಅಂತರದ ವಾಯು ರಕ್ಷಣಾ ವ್ಯವಸ್ಥೆ, ಲೇಸರ್‌ ಆಧಾರಿತ ರಕ್ಷಣಾ ವ್ಯವಸ್ಥೆಯನ್ನೂ ಹೊಂದಲಿದೆ ಎಂದು ವರದಿಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.