
ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಏರಿಕೆ ಆಗುತ್ತಿರುವುದು ಸಂತೋಷ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ರ‍್ಯಾಂಕಿಂಗ್ ಪಟ್ಟಿಯನ್ನು ಹಂಚಿಕೊಂಡಿರುವ ಮೋದಿ, 2016ರಲ್ಲಿ ಭಾರತದ 24 ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿ ಇದ್ದವು. ಆ ಸಂಖ್ಯೆ 2026ರ ಹೊತ್ತಿಗೆ 294ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
'ಕಳೆದ ಒಂದು ದಶಕದಲ್ಲಿ ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಶಿಕ್ಷಣ ಸಂಸ್ಥೆಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ನೋಡಲು ಸಂತಸವಾಗುತ್ತದೆ. ಯುವ ಜನರಿಗೆ ಸಂಶೋಧನೆ ಮತ್ತು ನಾವೀನ್ಯತೆಗೆ ಆದ್ಯತೆಯುಳ್ಳ ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ' ಎಂದು ಒತ್ತಿ ಹೇಳಿದ್ದಾರೆ.
ಮಂಗಳವಾರ ಪ್ರಕಟವಾಗಿರುವ ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿ ಪ್ರಕಾರ, ಐದು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ), ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ, ದೆಹಲಿ ವಿಶ್ವ ವಿದ್ಯಾಲಯ ಏಷ್ಯಾದ ಅಗ್ರ ನೂರು ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿವೆ.
ಐಐಟಿ – ದೆಹಲಿ, ಐಐಟಿ – ಮದ್ರಾಸ್, ಐಐಟಿ – ಬಾಂಬೆ, ಐಐಟಿ – ಕಾನ್ಪುರ, ಐಐಟಿ – ಖರಗಪುರ ಪಟ್ಟಿಯಲ್ಲಿವೆ. ಈ ಪೈಕಿ, ಅಗ್ರ (59ನೇ) ಸ್ಥಾನದಲ್ಲಿರುವ ಐಐಟಿ – ದೆಹಲಿ, ಸತತ ಐದನೇ ವರ್ಷವೂ ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.