ADVERTISEMENT

ಕ್ವಾರಂಟೈನ್‌ ಕಡ್ಡಾಯ | ದೆಹಲಿಯಿಂದ ಕನ್ನಡಿಗರನ್ನು ಕರೆದೊಯ್ಯಲು ಕ್ರಮ

​ಪ್ರಜಾವಾಣಿ ವಾರ್ತೆ
Published 7 ಮೇ 2020, 16:01 IST
Last Updated 7 ಮೇ 2020, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರ ಭಾರತ ಪ್ರವಾಸ, ಉದ್ಯೋಗ, ಯುಪಿಎಸ್‌ಸಿ ಪರೀಕ್ಷಾ ತರಬೇತಿ ಮತ್ತಿತರ ಉದ್ದೇಶದಿಂದ ಬಂದು, ಲಾಕ್‌ಡೌನ್‌ ವೇಳೆ ದೆಹಲಿ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಸಿಲುಕಿರುವ 600ಕ್ಕೂ ಅಧಿಕ ಕನ್ನಡಿಗರನ್ನು ಶೀಘ್ರವೇ ಕರೆದೊಯ್ಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ರಾಜ್ಯದಿಂದ ಹೊರಗಡೆ ಸಿಲುಕಿರುವವರನ್ನು ಮರಳಿ ಕರೆದೊಯ್ಯುವ ನಿಟ್ಟಿನಲ್ಲಿ 2ನೇ ಹಂತದ ಲಾಕ್‌ಡೌನ್ ಪೂರ್ಣಗೊಂಡ ಬಳಿಕ ರಾಜ್ಯ ಸರ್ಕಾರ ಆರಂಭಿಸಿರುವ ‘ಸೇವಾ ಸಿಂಧು’ ಸಹಾಯವಾಣಿ ಅಡಿ ನೋಂದಣಿ ಮಾಡಿಕೊಂಡಿರುವ 600 ಜನರನ್ನು ಮುಂದಿನ ಭಾನುವಾರ ಅಥವಾ ಸೋಮವಾರ ರೈಲಿನ ಮೂಲಕ ಕರೆದೊಯ್ಯಲು ಸಿದ್ಧತೆ ನಡೆಸಲಾಗಿದೆ.

ಸರ್ಕಾರಿ ಕ್ವಾರಂಟೈನ್‌ ಕಡ್ಡಾಯ:‘ಶ್ರಮಿಕ ವಿಶೇಷ’ ರೈಲಿನಲ್ಲಿ ಎಲ್ಲ ಪ್ರಯಾಣಿಕರನ್ನೂ ಮೊದಲು ಬೆಂಗಳೂರಿಗೆ ಕರೆದೊಯ್ದು, ನಂತರ ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲರನ್ನೂ ಕಡ್ಡಾಯವಾಗಿ ಸರ್ಕಾರ ಆರಂಭಿಸಿರುವ ಕ್ವಾರಂಟೈನ್‌ ಕೇಂದ್ರಗಳಲ್ಲೇ ಇರಿಸಲಾಗುವುದು ಎಂದು ಕರ್ನಾಟಕ ಭವನದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದೆಹಲಿಯಿಂದ ಹೊರಡುವ ರೈಲಿಗೆ ಮಾರ್ಗ ಮಧ್ಯೆ ಎಲ್ಲೂ ನಿಲುಗಡೆ ಇಲ್ಲ. ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರಯಾಣದ ವೇಳೆ ಸೂಕ್ತ ಭದ್ರತೆ ಒಗಿಸಲಾಗುತ್ತದೆ. ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಜನರ ಸುರಕ್ಷತೆಯ ದೃಷ್ಟಿಯಿಂದ ಎಲ್ಲರನ್ನೂ ಬೆಂಗಳೂರಿಗೆ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಮನವಿ ಮೇರೆಗೆ ರೈಲ್ವೆ ಸಚಿವ ಪೀಯೂಷ್‌ ಗೋಯೆಲ್‌ ಅವರೊಂದಿಗೆ ಚರ್ಚಿಸಲಾಗಿದ್ದು, ಅವರು ವಿಶೇಷ ರೈಲಿನ ಸೌಲಭ್ಯ ಕಲ್ಪಿಸಲು ಒಪ್ಪಿದ್ದಾರೆ. 1,200 ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ಇದೆ. ಆದರೆ, ನೋಂದಣಿ ಮಾಡಿಕೊಂಡಿರುವ ಸಂಖ್ಯೆ ಕಡಿಮೆ ಇರುವುದರಿಂದ ಮೊದಲು ಸೌಲಭ್ಯ ಕಲ್ಪಿಸಲು ಒಪ್ಪದಿದ್ದ ಇಲಾಖೆ, ನಂತರ ವಿಶೇಷ ರೈಲು ಬಿಡಲು ಸಮ್ಮತಿ ಸೂಚಿಸಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ‘ಪ್ರಜಾವಾಣಿ’ಗೆ ಹೇಳಿದರು.

ರೈಲ್ವೆ ಇಲಾಖೆ ಸೂಚಿಸಿದಷ್ಟು ಸಂಖ್ಯೆಯ ಪ್ರಯಾಣಿಕರು ಇಲ್ಲದ್ದರಿಂದ ಎಲ್ಲರನ್ನೂ ಬಸ್‌ ಮೂಲಕ ಕಳುಹಿಸಲು ಚಿಂತನೆ ನಡೆಸಲಾಗಿತ್ತು. ಆದರೆ, ಬಸ್‌ನಲ್ಲಿ ಸತತ 36 ಗಂಟೆ ಪ್ರಯಾಣ ಕಷ್ಟಕರ ಎಂಬ ಕಾರಣದಿಂದ ಪ್ರಸ್ತಾವನೆ ಕೈಬಿಟ್ಟು ರೈಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಕೊಲ್ಲಿ ರಾಷ್ಟ್ರಗಳಿಂದ ವಿಮಾನ ಸೌಲಭ್ಯ
ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗಿದ್ದು, ಮೊದಲ ವಿಮಾನ ಇದೇ 12ರಂದು ದುಬೈನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ತರಲಿದೆ.

ದೋಹಾದಿಂದ ಬೆಂಗಳೂರಿಗೆ ಮತ್ತೊಂದು ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಯಾಣದ ದಿನಾಂಕ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

**
ಲಾಕ್‌ಡೌನ್‌ನಿಂದಾಗಿ ಹಾಸ್ಟೆಲ್‌ಗಳಲ್ಲಿ ಸಿಲುಕಿರುವ ನಮಗೆ ಊಟ– ತಿಂಡಿಯೂ ಸಹ ಸಿಗದೆ ಪರದಾಡುವಂತಾಗಿದೆ. ಸರ್ಕಾರ ಶೀಘ್ರವೇ ನಮ್ಮನ್ನು ಕರೆದೊಯ್ಯಲು ಕ್ರಮ ಕೈಗೊಂಡರೆ ನಾವು ಕ್ವಾರಂಟೈನ್‌ನಲ್ಲಿ ಇರಲು ಸಿದ್ಧ.
–ವಿಜಯಲಕ್ಷ್ಮೀ ರಡ್ಡಿಯವರ, ದೆಹಲಿಯ ತಿಲಕ್‌ನಗರದಲ್ಲಿ ಸಿಲುಕಿಕೊಂಡಿರುವ ಗದುಗಿನ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.