ನವದೆಹಲಿ: ಕೋವಿಡ್- 19ಲಾಕ್‍ಡೌನ್ ಹೊತ್ತಲ್ಲಿಯೇ ಸಾವಿರಾರು ವಲಸೆ ಕಾರ್ಮಿಕರು ನಗರಗಳಿಂದತಮ್ಮ ಊರುಗಳಿಗೆ ತೆರಳಿದ್ದಾರೆ.ಹೀಗೆ ಲಾಕ್‌ಡೌನ್ ಆದೇಶ ಉಲ್ಲಂಘಿಸಿದವರನ್ನು ಕಡ್ಡಾಯ 14 ದಿನ ಕ್ವಾರಂಟೈನ್‌ನಲ್ಲಿರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆಆದೇಶ ನೀಡಿದೆ. ಕ್ವಾರಂಟೈನ್ ಅವಧಿಯಲ್ಲಿ ವ್ಯಕ್ತಿಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗಬಾರದು ಎಂದು ಸರ್ಕಾರ ಹೇಳಿದೆ.
ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಇದನ್ನು ಅನುಷ್ಠಾನಗೊಳಿಸುವ ಹೊಣೆಯನ್ನು ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಲಾಗಿದೆ.
ದೇಶವ್ಯಾಪಿ ಲಾಕ್‍ಡೌನ್ ಆಗಿರುವಾಗ ದೇಶದ ಕೆಲವು ಭಾಗಗಳಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಹಾಗಾಗಿ ಲಾಕ್‍ಡೌನ್ ಎಲ್ಲೆಡೆ ಅನುಷ್ಠಾನವಾಗಲೇ ಬೇಕಿದೆ ಎಂದು ಸರ್ಕಾರ ಹೇಳಿದೆ.
ಜಿಲ್ಲೆ ಮತ್ತು ರಾಜ್ಯದ ಎಲ್ಲ ಗಡಿಗಳನ್ನು ಮುಚ್ಚಬೇಕು. ಒಂದು ನಗರದಿಂದ ಇನ್ನೊಂದು ನಗರಕ್ಕೆ ಅಥವಾ ಹೆದ್ದಾರಿ ಮೂಲಕ ಯಾವುದೇ ಓಡಾಟ ಇರದಂತೆ ರಾಜ್ಯಗಳು ಗಮನ ಹರಿಸಬೇಕು. ಸರಕು ಸಾಗಿಸಲು ಮಾತ್ರ ಅನುಮತಿ ಇದೆ.ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿದವರು ಮತ್ತು ಲಾಕ್‍ಡೌನ್ ಹೊತ್ತಲ್ಲಿ ಪ್ರಯಾಣ ಮಾಡಿದವರನ್ನು ಸರ್ಕಾರ ವಸತಿಸೌಲಭ್ಯ ನೀಡಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಿಸಬೇಕು. ಈ ರೀತಿಯ ವ್ಯಕ್ತಿಗಳ ಮೇಲೆ ನಿಗಾ ಇರಿಸಲಿರುವ ನಿರ್ದೇಶನಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭಾನುವಾರ ಹೊರಡಿಸಿದ ನೂತನ ಆದೇಶದಲ್ಲಿ ಹೇಳಿದೆ.
ಲಾಕ್‌ಡೌನ್ ಇದ್ದರೂ ಬಹುಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುತ್ತಿದ್ದಾರೆ. ಇದು ಲಾಕ್‍ಡೌನ್ ಆದೇಶದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಒಂದು ಪ್ರದೇಶದಿಂದ ತಮ್ಮ ಊರುಗಳಿಗೆ ತೆರಳಿರುವ ವಲಸೆ ಕಾರ್ಮಿಕರನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರ ಒದಗಿಸುವ ವಸತಿಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಬೇಕು ಎಂದು ಆದೇಶದಲ್ಲಿ ಹೇಳಿದೆ.
ಶುಕ್ರವಾರ ದೆಹಲಿಯಲ್ಲಿದ್ದ ಬಿಹಾರ ಮತ್ತು ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಊರಿಗೆ ಹೋಗಲು ಆನಂದ ವಿಹಾರ್ ಬಸ್ ನಿಲ್ದಾಣದಲ್ಲಿ ಗುಂಪುಗೂಡಿ ನಿಂತಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಲಾಕ್‍ಡೌನ್ವೇಳೆ ಪ್ರಯಾಣ ನಿಷೇಧ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಲ್ಲ ನಿಯಮಗಳು ಇಲ್ಲಿ ಉಲ್ಲಂಘನೆಯಾಗಿದ್ದವು. ಅದೇ ವೇಳೆ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಇರಲು ಜಾಗ ಕಲ್ಪಿಸುವುದಕ್ಕಾಗಿ ನಿರಾಶ್ರಿತರ ಶಿಬಿರ ಸ್ಥಾಪಿಸಲು ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಹೇಳಿದೆ.
ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯಲ್ಲಿ ಸರಿಯಾಗಿ ಸಂಬಳ ನೀಡಬೇಕು.ಒಂದು ತಿಂಗಳ ಕಾಲ ಕಾರ್ಮಿಕರಲ್ಲಿ ಮನೆ ಬಾಡಿಗೆ ಕೇಳುವಂತಿಲ್ಲ, ಕಾರ್ಮಿಕರನ್ನು ಅಥವಾ ವಿದ್ಯಾರ್ಥಿಗಳನ್ನು ಬಾಡಿಗೆ ಮನೆಯಿಂದ ಹೊರ ಹಾಕಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ಆದೇಶದಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.