ADVERTISEMENT

ಕುಡಿತ ಬಿಡಿ, ಸ್ಕಾಲರ್‌ಶಿಪ್‌ ಗೆಲ್ಲಿ: ಮಹಾರಾಷ್ಟ್ರ ಹಳ್ಳಿಯಲ್ಲಿ ವಿನೂತನ ಪ್ರಯತ್ನ

ಕುಡಿತ ಬಿಡುವುದಾಗಿ ಪ್ರಮಾಣ ಮಾಡಲಿರುವ ಗೌಂದರೆ ಗ್ರಾಮದ ಮೋಹನ್‌ ಕೊಪ್ನರ್‌

ಪಿಟಿಐ
Published 14 ಆಗಸ್ಟ್ 2022, 13:35 IST
Last Updated 14 ಆಗಸ್ಟ್ 2022, 13:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ (ಪಿಟಿಐ): ಮೋಹನ್‌ ಕೊಪ್ನರ್‌ ಅವರ ಕುಟುಂಬ ಬಹಳ ಸಂತೋಷಗೊಂಡಿದೆ. ಇನ್ನೆಂದೂ ಮದ್ಯ ಸೇವಿಸುವುದಿಲ್ಲ ಎಂದು ಆಗಸ್ಟ್‌ 15ರಂದು ಗ್ರಾಮದವರ ಎದುರು ಪ್ರಮಾಣ ಮಾಡಲಿದ್ದೇನೆ ಎಂದು ಮೋಹನ್‌ ಹೇಳಿದಾಗಿನಿಂದ, ಆತನ ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ನೆಮ್ಮದಿಯ ದಿನಗಳ ನಿರೀಕ್ಷೆಯಲ್ಲಿದ್ದಾರೆ.

ಸೋಲಾಪುರ ಜಿಲ್ಲೆಯ ಕರ್ಮಾಲ್‌ ತಾಲ್ಲೂಕಿನ ಗೌಂದರೆ ಎಂಬ ಗ್ರಾಮದ ಗ್ರಾಮ ಪಂಚಾಯಿತಿಯು ‘ಕುಡಿತ ಬಿಡಿ, ಮಕ್ಕಳಿಗೆ ಸ್ಕಾಲರ್‌ಶಿಪ್‌ ಗೆಲ್ಲಿ’ ಎನ್ನುವ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದೆ. ಯಕ್ಷಕಲ್ಯಾಣಿ ಗ್ರಾಮಿನ್‌ ಸೇವಾಭಾವಿ ಸಂಸ್ಥಾ ಮತ್ತು ಗ್ರಾಮ ಸುಧಾರ್‌ ಸಮಿತಿ ಎಂಬ ಎರಡು ಎನ್‌ಜಿಒಗಳ ಜೊತೆ ಸೇರಿ ಪಂಚಾಯಿತಿಯು ಈ ಯೋಜನೆ ರೂಪಿಸಿದೆ.

ಜನರು ತಮ್ಮ ಸ್ವಂತ ಇಚ್ಛೆಯಿಂದ ಕುಡಿತದ ಚಟದಿಂದ ದೂರಾಗುವಂತೆ ಮಾಡುವುದು. ಆ ಮೂಲಕ ಅವರ ಮತ್ತು ಅವರ ಕುಟುಂಬದ ಆರೋಗ್ಯದ ರಕ್ಷಣೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ADVERTISEMENT

‘ಆಗಸ್ಟ್‌ 15ರಂದು ಗ್ರಾಮದವರ ಎದುರು ಕುಡಿತ ಬಿಡುವುದಾಗಿ ಪ್ರಮಾಣ ಮಾಡುವ ವ್ಯಕ್ತಿಯ ಮಕ್ಕಳಿಗೆ ಆಗಸ್ಟ್‌ 15, 2023ರ ವೇಳೆಗೆವಿದ್ಯಾರ್ಥಿ ವೇತನ ನೀಡಲಾಗುವುದು. ಜತೆಗೆ ಆ ವ್ಯಕ್ತಿಯನ್ನು ಸನ್ಮಾನಿಸಲಾಗುವುದು’ ಎಂದು ಪಂಚಾಯಿಸಿ ಅಭಿವೃದ್ಧಿ ಅಧಿಕಾರಿ ಮನೋಜ್‌ ರೌತ್‌ ಹೇಳಿದರು.

ಕರ್ಮಾಲ್‌ ತಾಲ್ಲೂಕಿನ 105 ಹಳ್ಳಿಗಳ ಗ್ರಾಮ ಪಂಚಾಯಿತಿಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಈ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಹೆಚ್ಚು ಹೆಚ್ಚು ಜನ ಪ್ರಮಾಣ ಮಾಡುವ ಭರವಸೆ ಇದೆ ಎಂದರು.

‘ನಾನು ಕೃಷಿ ಕಾರ್ಮಿಕ. ಹಲವು ವರ್ಷಗಳಿಂದ ನಾನು ಮದ್ಯ ವ್ಯಸನಿಯಾಗಿದ್ದೇನೆ. ಗ್ರಾಮಸಭೆಯಲ್ಲಿ ಈ ಯೋಜನೆ ಕುರಿತು ತಿಳಿಸಲಾಯಿತು. ಆಗಲೇ ನಾನು ಪ್ರಮಾಣ ಮಾಡುವುದಾಗಿ ಘೋಷಿಸಿದೆ’ ಎಂದರು ಮೋಹನ್‌ ಕೊಪ್ನರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.