ನವದೆಹಲಿ: ದೇಶದ ಕಾರಾಗೃಹಗಳಲ್ಲಿ ಕೈದಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡುತ್ತಿರುವುದು ಗಂಭೀರ ಸವಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಕಾನೂನು ಸುವ್ಯವಸ್ಥೆ ಹಾಗೂ ಆಂತರಿಕ ಭದ್ರತೆ ಖಾತ್ರಿಪಡಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಈ ಕುರಿತು ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದೆ.
‘ಜೈಲುಗಳಲ್ಲಿನ ಕೈದಿಗಳು ಸಮಾಜದಿಂದ ದೂರವಾಗಿರುತ್ತಾರೆ. ಅವರ ಚಲನವಲನಗಳ ಮೇಲೆ ಕಣ್ಣಿಡುವುದು ಅಗತ್ಯ. ಈ ವಿಚಾರದಲ್ಲಿ ತೋರುವ ನಿರ್ಲಕ್ಷ್ಯ ಭಾರಿ ಅಪಾಯಗಳಿಗೆ ದಾರಿ ಮಾಡಿಕೊಡಬಹುದು. ಹೀಗಾಗಿ, ಸೆರೆವಾಸದಲ್ಲಿರುವವರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿರುವುದು ಅಪಾಯಕಾರಿ’ ಎಂದು ಸಚಿವಾಲಯ ಹೇಳಿದೆ.
ಕೈದಿಗಳಲ್ಲಿ ಸಾಮಾನ್ಯವಾಗಿ ಪರಕೀಯ ಭಾವನೆ ಮನೆ ಮಾಡಿರುತ್ತದೆ. ಇದು ಅವರನ್ನು ಮೂಲಭೂತವಾದದ ಸಂಕಥನಗಳತ್ತ ಆಕರ್ಷಣೆಗೊಳ್ಳುವಂತೆ ಮಾಡುತ್ತದೆ. ಅವರಲ್ಲಿ ಹಿಂಸಾತ್ಮಕ ವರ್ತನೆ ಅಥವಾ ಸಮಾಜ ವಿರೋಧಿ ಪ್ರವೃತ್ತಿ ಬೆಳೆಯುವಂತೆ ಮಾಡುತ್ತದೆ
ಕೆಲ ಪ್ರಕರಣಗಳಲ್ಲಿ ಕೈದಿಗಳು ಇತರ ಕೈದಿಗಳ ಮೇಲೆ ಅಥವಾ ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದಕ್ಕೆ ಮೂಲಭೂತವಾದ ಪ್ರಚೋದನೆ ನೀಡಬಹುದು
ಕೈದಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡುವುದು ಹೆಚ್ಚುತ್ತಿರುವುದು ಹಲವು ಕ್ರಿಮಿನಲ್ ಚಟುವಟಿಕೆಗಳಿಗೂ ಕಾರಣವಾಗಲಿದೆ
ಕೈದಿಗಳು ತೋರುವ ವರ್ತನೆ ಅವರು ಅನುಸರಿಸುವ ಸಿದ್ಧಾಂತಗಳ ಆಧಾರದಲ್ಲಿ ಅವರನ್ನು ಗುರುತಿಸುವುದಕ್ಕಾಗಿ ತಂತ್ರಗಳನ್ನು ಅಭಿವೃದ್ದಿಪಡಿಸಬೇಕು
ಜೈಲಿನಲ್ಲಿರಿಸಿದ ದಿನ ಹಾಗೂ ನಂತರದ ಅವಧಿಯಲ್ಲಿ ಕೈದಿಗಳ ಕುರಿತು ನಿಯಮಿತವಾಗಿ ಮೌಲ್ಯಮಾಪನ ನಡೆಸಬೇಕು. ಇದಕ್ಕಾಗಿ ಗುಪ್ತಚರ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳ ನೆರವು ಪಡೆಯಬೇಕು
ಇತರ ಕೈದಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಗ್ರಹಿಸಿ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು
ಮೂಲಭೂತವಾದ ಸಿದ್ಧಾಂತ ಪ್ರಚುರಪಡಿಸುವ ಒಲವು ಹೊಂದಿರುವ ಅಪಾಯಕಾರಿ ಎನಿಸುವ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು
ಉಗ್ರರು ಹಾಗೂ ಮೂಲಭೂತವಾದದಿಂದ ಆಕರ್ಷಿತರಾಗಿರುವ ಕೈದಿಗಳನ್ನಿರಿಸುವುದಕ್ಕಾಗಿ ಅಧಿಕ ಭದ್ರತೆ ಇರುವ ಜೈಲು ಸಂಕೀರ್ಣಗಳನ್ನು ನಿರ್ಮಿಸಲು ಪರಿಶೀಲಿಸಬೇಕು. ಇಂಥವರ ಮೇಲೆ ನಿರಂತರ ಕಣ್ಗಾವಲಿರಿಸಬೇಕು
ಕೈದಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದನ್ನು ಪ್ರೋತ್ಸಾಹಿಸಬೇಕು. ಇದು ಅವರಲ್ಲಿ ಭಾವನಾತ್ಮಕ ಸ್ಥಿರತೆ ಕಾಪಾಡಲು ನೆರವಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.