ADVERTISEMENT

ಕಾಂಗ್ರೆಸ್‌ಗೆ ದಿಕ್ಕಿಲ್ಲ, ದೀರ್ಘಾವಧಿವರೆಗೆ ಅಧಿಕಾರಕ್ಕೇರಲ್ಲ: ರಾಯಬರೇಲಿ ಶಾಸಕಿ

ಪಿಟಿಐ
Published 23 ಮಾರ್ಚ್ 2022, 13:28 IST
Last Updated 23 ಮಾರ್ಚ್ 2022, 13:28 IST
ರಾಯಬರೇಲಿ ಶಾಸಕಿ ಅದಿತಿ ಸಿಂಗ್‌
ರಾಯಬರೇಲಿ ಶಾಸಕಿ ಅದಿತಿ ಸಿಂಗ್‌   

ರಾಯಬರೇಲಿ: ಅಸ್ತಿತ್ವದಲ್ಲೇ ಇಲ್ಲದ ಕಾರ್ಯವಿಧಾನ ಹೊಂದಿರುವ ಕಾಂಗ್ರೆಸ್‌ಗೆ ದಿಕ್ಕಿಲ್ಲ. ಅದು ದೀರ್ಘಾವಧಿವರೆಗೆ ಅಧಿಕಾರಕ್ಕೆ ಬರುವಂತೆ ಕಾಣಿಸುತ್ತಿಲ್ಲ ಎಂದು ರಾಯಬರೇಲಿ ಶಾಸಕಿ ಅದಿತಿ ಸಿಂಗ್‌ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಅದಿತಿ ಸಿಂಗ್‌, ಪಕ್ಷಾಂತರದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಆರ್‌ಪಿ ಯಾದವ್‌ ಅವರ ವಿರುದ್ಧ 7,100 ಮತಗಳಿಂದ ಅದಿತಿ ಸಿಂಗ್‌ ಗೆಲುವು ದಾಖಲಿಸಿದ್ದಾರೆ.

ಚುನಾವಣೆ ಪೂರ್ವದಲ್ಲಿ 34 ವರ್ಷದ ಅದಿತಿ ಸಿಂಗ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ADVERTISEMENT

'ನನಗೆ ಅವರ ಜೊತೆ ಸಂಘಟಿತವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅವರ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳಲು ಅಥವಾ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯ ವಿಧಾನವೇ ಅಲ್ಲಿ ಅಸ್ತಿತ್ವದಲ್ಲಿಲ್ಲ. ಹೀಗಿರುವಾಗ ನೀವು ಬೆಳೆಯಲು ಹೇಗೆ ಸಾಧ್ಯ? ಕಳೆದ ಬಾರಿ ಶಾಸಕಿಯಾಗಿ ಆಯ್ಕೆಯಾಗುವಾಗ ನನಗೆ 29 ವರ್ಷ. ಈ ವರ್ಷಗಳಲ್ಲಿ ರಾಜಕೀಯವಾಗಿ ಸಾಕಷ್ಟು ಕಲಿತಿದ್ದೇನೆ. ದಿಕ್ಕೇ ಇಲ್ಲದ ಪಕ್ಷದ ಜೊತೆ ನಾನೇನು ಮಾಡಲಿ?' ಎಂದು ಅದಿತಿ ಸಿಂಗ್‌ ಪ್ರಶ್ನಿಸಿದರು.

ರಾಯಬರೇಲಿ ವಿಧಾನಸಭಾ ಕ್ಷೇತ್ರದ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಿದ ಅದಿಸಿ ಸಿಂಗ್‌, 'ಸ್ವಾತಂತ್ರ್ಯದ ನಂತರ ಇದುವರೆಗೆ ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ. ಒಂದು ಬಾರಿ ಜನತಾ ದಳ ಗೆದ್ದಿದೆ. ನಮ್ಮ ಪಕ್ಷಕ್ಕೆ (ಬಿಜೆಪಿ) ಸ್ಪಷ್ಟ ನೋಟ ಮತ್ತು ಗುರಿ ಇದೆ. ಕೇಂದ್ರದಿಂದ, ರಾಜ್ಯಗಳಿಂದ, ವಿಧಾನಸಭಾ ಕ್ಷೇತ್ರದ ವರೆಗೆ ಕಠಿಣವಾಗಿ ಕೆಲಸ ಮಾಡುವ ನಾಯಕರಿದ್ದಾರೆ' ಎಂದರು.

'ರಾಯಬರೇಲಿ ಕಾಂಗ್ರೆಸ್‌ನ ಭದ್ರಕೋಟೆ. ಈಗಲೂ ಹೆಚ್ಚಿನ ಜನರಿಗೆ ಕಾಂಗ್ರೆಸ್‌ ಮೇಲೆ ಒಲವಿದೆ. 5 ವರ್ಷ ಕಾಂಗ್ರೆಸ್‌ ಶಾಸಕಿಯಾಗಿದ್ದಾಗ, ಒಂದು ನಿರ್ದಿಷ್ಟ ವರ್ಗದಿಂದ ಆಡಳಿತ ವಿರೋಧವೂ ಇತ್ತು. ಈ ಸವಾಲುಗಳ ನಡುವೆ ಗೆದ್ದಿರುವುದಕ್ಕೆ ಖುಷಿಯಾಗುತ್ತಿದೆ ಮತ್ತು ಹೆಮ್ಮೆಯಾಗುತ್ತಿದೆ' ಎಂದರು.

ಅಮೆರಿಕದ ಡ್ಯೂಕ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡಿರುವ ಅದಿತಿ ಸಿಂಗ್‌ ಅವರು ರಾಯಬರೇಲಿಯಿಂದ 5 ಬಾರಿ ಶಾಸಕರಾಗಿದ್ದ ಅಖಿಲೇಶ್‌ ಸಿಂಗ್‌ ಅವರ ಪುತ್ರಿ. ಅನಾರೋಗ್ಯದ ಕಾರಣದಿಂದ 2019ರ ಆಗಸ್ಟ್‌ನಲ್ಲಿ ಅಖಿಲೇಶ್‌ ಮೃತಪಟ್ಟಿದ್ದರು.

'ಅಮೆರಿಕದಲ್ಲಿ ದೀರ್ಘಕಾಲ ನೆಲೆಸಿದ್ದ ನಾನು, ನಮ್ಮ ದೇಶಕ್ಕಾಗಿ ಏನಾದರೂ ಮಾಡಬೇಕು ಎಂದು ಹಿಂತಿರುಗಿದೆ. ಒಂದು ಸಿದ್ಧಾಂತದ ಪರವಾಗಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುವುದನ್ನು ನೋಡಿ ಪ್ರಭಾವಿತಳಾದೆ. ರಾಷ್ಟ್ರ ನಿರ್ಮಾಣದಲ್ಲಿ ನಾನೂ ಸೇರಬೇಕು ಎಂಬ ಇಚ್ಛೆಯಿಂದ ಬಿಜೆಪಿ ಸೇರಿದೆ' ಎಂದು ಅದಿತಿ ಸಿಂಗ್‌ ಅವರು ಸುದ್ದಿ ಸಂಸ್ಥೆ 'ಪಿಟಿಐ'ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.