ADVERTISEMENT

ರಫೇಲ್‌ ಹಗರಣ: ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ: ಕಾಂಗ್ರೆಸ್‌ಗೆ ರಿಲಯನ್ಸ್‌ ಕಂಪನಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 20:02 IST
Last Updated 22 ಆಗಸ್ಟ್ 2018, 20:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ತಮ್ಮ ಕಂಪನಿ ಹೆಸರು ಎಳೆತಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಕೆಲವು ಮುಖಂಡರ ವಿರುದ್ಧ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಸಮೂಹ ಸಂಸ್ಥೆ ಮಾನನಷ್ಟ ಮೊಕದ್ದಮೆ ಹೂಡಿದೆ.

ಕಾಂಗ್ರೆಸ್‌ ನಾಯಕರಾದ ರಣದೀಪ್‌ ಸುರ್ಜೇವಾಲಾ, ಅಶೋಕ್‌ ಚವಾಣ್‌, ಸಂಜಯ್‌ ನಿರುಪಮ್‌, ಅನುರಾಗ್‌ ನಾರಾಯಣ ಸಿಂಗ್‌, ಉಮ್ಮನ್‌ ಚಾಂಡಿ, ಶಕ್ತಿಸಿನ್ಹಾ ಗೋಹಿಲ್‌, ಅಭಿಷೇಕ್‌ ಮನು ಸಿಂಘ್ವಿ, ಸುನಿಲ್‌ ಜಾಖಡ್‌ ಮತ್ತು ಪ್ರಿಯಾಂಕಾ ಚತುರ್ವೇದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ತಪ್ಪು ಮಾಹಿತಿಯಿಂದ ಕೂಡಿದ ನಿರಾಧಾರ ಆರೋಪ ಮಾಡಿದ್ದಾರೆ.ರಿಲಯನ್ಸ್‌ ಸಮೂಹ ಸಂಸ್ಥೆಗಳು ಕಳಿಸಿದ ನೋಟಿಸ್‌ಗೆ ಉತ್ತರಿಸದ ಕಾರಣ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರತ್ಯೇಕ ಮಾನಹಾನಿ ಮೊಕದ್ದಮೆ ಹೂಡಲಾಗಿದೆ ಎಂದು ರಿಲಯನ್ಸ್‌ ಕಂಪನಿಯ ಕಾನೂನು ಸಲಹಾ ಸಂಸ್ಥೆ ತಿಳಿಸಿದೆ.

ADVERTISEMENT

ಈ ಕುರಿತು ಕಾನೂನು ಸಂಸ್ಥೆ ಬುಧವಾರ ಕಾಂಗ್ರೆಸ್‌ ಮಾಧ್ಯಮ ಸಂಯೋಜಕ ಸಂಜೀವ್‌ ಸಿಂಗ್‌ ಅವರಿಗೆ ಪತ್ರ ಬರೆದಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ರಿಲಯನ್ಸ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಅನಿಲ್‌ ಅಂಬಾನಿ ಪತ್ರ ಬರೆದ ಮರುದಿನವೇ ಸಂಸ್ಥೆಯು ಕಾನೂನು ಕ್ರಮಕ್ಕೆ ಮುಂದಾಗಿದೆ.

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ನಡೆದ ಅತಿ ದೊಡ್ಡ ಹಗರಣವಾಗಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್‌ ತನ್ನ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಪಕ್ಷದ ಮುಖಂಡ ಶಕ್ತಿಸಿನ್ಹಾ ಗೋಹಿಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸಂಸತ್‌ನಲ್ಲಿ ನಡೆದ ಚರ್ಚೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಅಂಕಿ, ಅಂಶಗಳನ್ನು ಆಧರಿಸಿ ಕಾಂಗ್ರೆಸ್‌ ರಫೇಲ್‌ ಹಗರಣದ ಬಗ್ಗೆ ಆರೋಪ ಮಾಡಿದೆ ಎಂದು ಅವರು ಹೇಳಿದ್ದಾರೆ.

ಉದ್ಯಮ ಕ್ಷೇತ್ರದ ವಿರೋಧಿಗಳ ಕುಮ್ಮಕ್ಕಿನಿಂದ ಕಾಂಗ್ರೆಸ್‌ ನಾಯಕರು ರಿಲಯನ್ಸ್‌ ವಿರೋಧಿ ಆಂದೋಲನ ಆರಂಭಿಸಿದ್ದಾರೆ. ರಿಲಯನ್ಸ್‌ ಹೆಸರಿಗೆ ಮಸಿ ಬಳಿಯುವ ಮತ್ತು ಗ್ರಾಹಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮತ್ತು ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಕಂಪನಿಯು ಆರೋಪಿಸಿದೆ.

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌, ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ ಮತ್ತು ರಿಲಯನ್ಸ್‌ ಏರೊಸ್ಟ್ರಕ್ಚರ್‌ ಲಿಮಿಟೆಡ್‌ ಸಮೂಹ ಸಂಸ್ಥೆಗಳ ಪರವಾಗಿ ಮುಂಬೈನ ಮುಲ್ಲಾ ಆ್ಯಂಡ್‌ ಮುಲ್ಲಾ, ಕ್ರೇಗಿ ಬ್ಲಂಟ್‌ ಹಾಗೂ ಕ್ಯಾರೊ ಕಾನೂನು ಸಲಹಾ ಸಂಸ್ಥೆಗಳು ನೋಟಿಸ್‌ ನೀಡಿವೆ.

ಕಾಂಗ್ರೆಸ್‌ ಆರೋಪ ಏನು?

ಕೇಂದ್ರದ ಎನ್‌ಡಿಎ ಸರ್ಕಾರವು ಮಾಡಿಕೊಂಡ ರಫೇಲ್‌ ಒಪ್ಪಂದದಿಂದಾಗಿ ಬೊಕ್ಕಸಕ್ಕೆ ₹41 ಸಾವಿರ ಕೋಟಿ ನಷ್ಟವಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್‌ ಏರೊನಾಟಿಕಲ್ಸ್‌ ಲಿ. ನಿಂದ ಕಸಿದುಕೊಂಡು ₹30 ಸಾವಿರ ಕೋಟಿಯ ಗುತ್ತಿಗೆಯನ್ನು ಪ್ರಧಾನಿಯ ಗೆಳೆಯರೊಬ್ಬರ ಕಂಪನಿಗೆ ನೀಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.