ADVERTISEMENT

ರಫೇಲ್‌ ಖರೀದಿಗೆ ಅಡ್ಡಿ ಬೇಡ’

ಫ್ರಾನ್ಸ್‌ನಲ್ಲಿ ವಾಯು ಪಡೆ ಯೋಧರಿಗೆ ತರಬೇತಿ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:38 IST
Last Updated 25 ಮೇ 2019, 19:38 IST

ನವದೆಹಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಗೆ ತೊಡಕುಗಳಾದರೆ ಇಡೀ ಯೋಜನೆ ವಿಳಂಬವಾಗಲಿದೆ ಮತ್ತು ರಕ್ಷಣಾ ವ್ಯವಸ್ಥೆ ಬಲಪಡಿಸುವ ಕಾರ್ಯದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

2016ರಲ್ಲಿ ಭಾರತ ಮತ್ತು ಫ್ರಾನ್ಸ್‌ 36 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಅನ್ವಯ ಖರೀದಿ ಪ್ರಕ್ರಿಯೆ ಮೇಲೆ ಉಭಯ ಸರ್ಕಾರಗಳು ನಿರಂತರವಾಗಿ ನಿಗಾವಹಿಸಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಫ್ರಾನ್ಸ್‌ನಲ್ಲಿ ಭಾರತೀಯ ವಾಯು ಪಡೆಯ ಯೋಧರಿಗೆ ತರಬೇತಿ ಸಹ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ರಫೇಲ್‌ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷನ್‌ ಅವರು ಸಲ್ಲಿಸಿರುವ ಪುನರ್‌ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸರ್ಕಾರ ಕೋರಿದೆ.

ಯುದ್ಧ ವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದನ್ನು ಸಾಬೀತುಪಡಿಸಲು ಈ ಮೂವರು ಕೆಲವು ಆಯ್ದ ಮತ್ತು ಅಪೂರ್ಣ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದೆ.

ಸಿಎಜಿ ವರದಿಯನ್ನು ಉಲ್ಲೇಖಿಸಿರುವ ಕೇಂದ್ರ ಸರ್ಕಾರ, ಯುಪಿಎ ಸರ್ಕಾರ ಅಂತಿಮಗೊಳಿಸಿದ್ದ ದರಕ್ಕಿಂತಲೂ ಶೇಕಡ 2.8ರಷ್ಟು ಕಡಿಮೆ ದರಕ್ಕೆ ಈಗಿನ ಸರ್ಕಾರ ಖರೀದಿ ಪ್ರಕ್ರಿಯೆಯನ್ನು ಕೈಗೊಂಡಿದೆ ಎಂದು ಪ್ರತಿಪಾದಿಸಿದೆ.

ರಕ್ಷಣಾ ಸಚಿವರು ಮತ್ತು ರಕ್ಷಣಾ ಸ್ವಾಧೀನ ಮಂಡಳಿ ಜತೆ ಸಮಾಲೋಚನೆ ನಡೆಸಿದ ಬಳಿಕವೇ ಭದ್ರತೆ ಕುರಿತಾದ ಸಂಪುಟ ಸಮಿತಿ ಈ ಬಗ್ಗೆ ಎಲ್ಲ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದೆ.

ನ್ಯಾಯಾಲಯದಿಂದ ಖರೀದಿ ಪ್ರಕ್ರಿಯೆ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಮುಚ್ಚಿಟ್ಟಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.