ADVERTISEMENT

ಗಣರಾಜ್ಯೋತ್ಸವ: ಗಮನ ಸೆಳೆದ ರಫೇಲ್‌, ಪರೇಡ್‌ನಲ್ಲಿ ಸಾಹಸ ಪ್ರದರ್ಶನಕ್ಕೆ ಪದಾರ್ಪಣೆ

ಪಿಟಿಐ
Published 26 ಜನವರಿ 2021, 11:20 IST
Last Updated 26 ಜನವರಿ 2021, 11:20 IST
ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ರಫೇಲ್‌ ಯುದ್ಧವಿಮಾನದಿಂದ ‘ಬ್ರಹ್ಮಾಸ್ತ್ರ’ ಕಸರತ್ತು ಪ್ರದರ್ಶನ ನಡೆಯಿತು  –ಪಿಟಿಐ ಚಿತ್ರ
ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮಂಗಳವಾರ ರಫೇಲ್‌ ಯುದ್ಧವಿಮಾನದಿಂದ ‘ಬ್ರಹ್ಮಾಸ್ತ್ರ’ ಕಸರತ್ತು ಪ್ರದರ್ಶನ ನಡೆಯಿತು  –ಪಿಟಿಐ ಚಿತ್ರ   

ನವದೆಹಲಿ: ಭಾರತದ ವಾಯಪಡೆಗೆ ಸೇರ್ಪಡೆಗೊಂಡಿರುವ ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳು ಬಾನಂಗಳದಲ್ಲಿ ವಿವಿಧ ಕಸರತ್ತು ಪ್ರದರ್ಶಿಸುವ ಮೂಲಕ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮಂಗಳವಾರ ಪದಾರ್ಪಣೆ ಮಾಡಿದವು.

ಯುದ್ಧಕೌಶಲ ಸಾರುವ ‘ಬ್ರಹ್ಮಾಸ್ತ್ರ’ ಎಂಬ ಪ್ರದರ್ಶನವನ್ನು ರಫೇಲ್‌ ಏಕಾಂಗಿಯಾಗಿಯೇ ಮಾಡಿದರೆ, ನಾಲ್ಕು ಯುದ್ಧವಿಮಾನಗಳೊಂದಿಗೆ ‘ಏಕಲವ್ಯ’ ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆಯಿತು.

ರಫೇಲ್‌ ನೇತೃತ್ವದಲ್ಲಿ ಎರಡು ಜಾಗ್ವಾರ್‌, ಎರಡು ಎಂಐಜಿ–29 ಯುದ್ಧವಿಮಾನಗಳು 300 ಮೀಟರ್‌ ಎತ್ತರದಲ್ಲಿ ವಿವಿಧ ಸಾಹಸಗಳೊಂದಿಗೆ ಇಂಗ್ಲಿಷ್‌ ಅಕ್ಷರ ‘ವಿ’ ಆಕಾರದಲ್ಲಿ ನಡೆಸಿದ ಹಾರಾಟ ಮೈನವಿರೇಳಿಸುವಂತಿತ್ತು.

ADVERTISEMENT

ಭೂಮಿಗೆ ಅತಿ ಹತ್ತಿರದಲ್ಲಿ ಬಂದು, ನಂತರ ಮೇಲ್ಮುಖವಾಗಿ ನೇರವಾಗಿ ನಭಕ್ಕೆ ಚಿಮ್ಮಿದ ರಫೇಲ್‌, ಬಾನಂಗಳದಲ್ಲಿ ಹಲವು ಪಲ್ಟಿಗಳನ್ನು ಹೊಡೆಯುತ್ತಾ ಮೇಲೆ ಸಾಗಿತು. ನಂತರ ಬಹಳ ಎತ್ತರದಲ್ಲಿ ಹಾರಾಟ ಮುಂದುವರಿಸಿತು. ಈ ಸಾಹಸ ಪ್ರದರ್ಶನವನ್ನು ‘ಬ್ರಹ್ಮಾಸ್ತ್ರ’ ಎಂದು ಕರೆಯಲಾಗುತ್ತದೆ.

ಇತರ ಯುದ್ಧವಿಮಾನಗಳೊಂದಿಗೆ ರಫೇಲ್‌ನ ಪ್ರದರ್ಶನವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು.

ಫ್ರಾನ್ಸ್‌ನ ಡಾಸೊ ಏವಿಯೇಶನ್‌ ಕಂಪನಿ ನಿರ್ಮಿಸಿರುವ ರಫೇಲ್‌ ಯುದ್ಧವಿಮಾನಗಳನ್ನು ಕಳೆದ ವರ್ಷ ಸೆ. 10ರಂದು ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.