
ಹರಿಯಾಣದ ಅಂಬಾಲಾ ವಾಯುನೆಲೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ರಫೇಲ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದರು
ಚಿತ್ರ ಕೃಪೆ: rashtrapatibhvn
ಅಂಬಾಲ(ಹರಿಯಾಣ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಇಲ್ಲಿನ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಸಂಚರಿಸಿದರು.
ಬೆಳಿಗ್ಗೆ ವಾಯುನೆಲೆಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರಿಗೆ ಭಾರತೀಯ ವಾಯುಪಡೆಯ ಯೋಧರು ಗೌರವ ವಂದನೆ ಸಲ್ಲಿಸಿದರು. ನಂತರ ಮುರ್ಮು ಅವರು ಜಿ–ಸೂಟ್ ಮತ್ತು ಸನ್‌ಗ್ಲಾಸ್ ಧರಿಸಿ (ಪೈಲಟ್ ದಿರಿಸು), ಏರ್ ಚೀಫ್ ಮಾರ್ಷಲ್ ಮತ್ತು ವಾಯು ಪಡೆಯ ಇತರ ಅಧಿಕಾರಿಗಳೊಂದಿಗೆ ಫೋಟೊಗೆ ಪೋಸ್ ನೀಡಿದರು.
ಮುರ್ಮು ಅವರು ಏರಿದ ವಿಮಾನ 11.27ಕ್ಕೆ ಹಾರಾಟ ಆರಂಭಿಸಿತು. 17ನೇ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಗೆಹಾನಿ ಅವರು ಯುದ್ಧ ವಿಮಾನ ಚಲಾಯಿಸಿದರು. 30 ನಿಮಿಷಗಳ ಕಾಲ 200 ಕಿ.ಮೀ ದೂರ ಸುತ್ತಾಡಿದ ನಂತರ ವಿಮಾನ ವಾಯನೆಲೆಗೆ ಬಂದಿಳಿಯಿತು. ಈ ಯುದ್ಧ ವಿಮಾನವು ಸಮುದ್ರ ಮಟ್ಟದಿಂದ ಸುಮಾರು 15 ಸಾವಿರ ಅಡಿ ಎತ್ತರದಲ್ಲಿ, ಗಂಟೆಗೆ ಸುಮಾರು 700 ಕಿ.ಮೀ ವೇಗದಲ್ಲಿ ಹಾರಾಟ ನಡೆಸಿತು ಎಂದು ಎಂದು ರಾಷ್ಟ್ರಪತಿ ಕಚೇರಿಯ ಪ್ರಕಟಣೆ ತಿಳಿಸಿದೆ.
ವಿಮಾನ ಹಾರಾಟದ ನಂತರ ಮುರ್ಮು ಅವರು ಸಂದರ್ಶಕರ ಪುಸ್ತಕದಲ್ಲಿ, ‘ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನದಲ್ಲಿ ಸಂಚರಿಸಿದೆ. ಇದು ನನಗೆ ಮರೆಯಲಾಗದ ಅನುಭವ. ಈ ಹಾರಾಟವು, ರಾಷ್ಟ್ರದ ರಕ್ಷಣಾ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಹೊಸ ಹೆಮ್ಮೆಯ ಭಾವ ಮೂಡಿಸಿದೆ. ಇದಕ್ಕಾಗಿ ಭಾರತೀಯ ವಾಯುಪಡೆ ಮತ್ತು ಅಂಬಾಲಾದ ವಾಯುಪಡೆ ನಿಲ್ದಾಣದ ತಂಡವನ್ನು ನಾನು ಅಭಿನಂದಿಸುತ್ತೇನೆ’ ಎಂದು ಟಿಪ್ಪಣಿ ಬರೆದಿದ್ದಾರೆ.
ಮುರ್ಮು ಅವರು ಈ ಮೊದಲು 2023ರ ಏಪ್ರಿಲ್‌ನಲ್ಲಿ ಅಸ್ಸಾಂನ ತೇಜ್‌ಪುರ ವಾಯುನೆಲೆಯಿಂದ ‘ಸುಖೋಯ್–30’ ಎಂಕೆಐ ಯುದ್ಧ ವಿಮಾನದಲ್ಲಿ ಸಂಚರಿಸಿದ್ದರು. ಈಗ ರಫೇಲ್ ಯುದ್ಧವಿಮಾನದಲ್ಲಿ ಸಂಚರಿಸುವ ಮೂಲಕ ಎರಡು ಯುದ್ಧ ವಿಮಾನಗಳಲ್ಲಿ ಸಂಚರಿಸಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು ಕ್ರಮವಾಗಿ 2006ರ ಜೂನ್ 8ರಂದು ಮತ್ತು 2009ರ ನವೆಂಬರ್ 25 ರಂದು ಪುಣೆ ಬಳಿಯ ಲೋಹೆಗಾಂವ್‌ನ ವಾಯು ನೆಲೆಯಿಂದ ಸುಖೋಯ್ -30 ಎಂಕೆಐ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ್ದರು.
ಫ್ರೆಂಚ್ ಏರೋಸ್ಪೇಸ್ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲೊಂದಾದ ಡಸಾಲ್ಟ್ ಏವಿಯೇಷನ್ ತಯಾರಿಸಿರುವ ಈ ರಫೇಲ್ ಯುದ್ಧ ವಿಮಾನಗಳು ಸೆಪ್ಟೆಂಬರ್ 2020ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದವು.
ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ನಂತರ, ಪಾಕಿಸ್ತಾನ ನಿಯಂತ್ರಣ ಪ್ರದೇಶಗಳಲ್ಲಿನ ಭಯೋತ್ಪಾದಕ ಸಂಘಟನೆಗಳ ನೆಲೆಯನ್ನು ನಾಶ ಮಾಡಲು ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಈ ರಫೇಲ್ ಜೆಟ್‌ಗಳನ್ನು ಬಳಸಲಾಗಿತ್ತು.
ಎ.ಪಿ. ಸಿಂಗ್ ಸಂಚಾರ: ರಾಷ್ಟ್ರಪತಿ ಅವರ ಬಳಿಕ, ಏರ್‌ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಕೂಡ ಅದೇ ವಾಯುನೆಲೆಯಿಂದ ಪ್ರತ್ಯೇಕ ವಿಮಾನದಲ್ಲಿ ಹಾರಾಟ ನಡೆಸಿದರು.
ಶಿವಾಂಗಿಯೊಂದಿಗೆ ಫೋಟೊ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ಆರಂಭಿಸುವ ಮುನ್ನ ದೇಶದ ಮೊದಲ ಮಹಿಳಾ ರಫೇಲ್ ಯುದ್ಧ ವಿಮಾನ ಪೈಲಟ್ ಶಿವಾಂಗಿ ಸಿಂಗ್ ಅವರೊಂದಿಗೆ ಫೊಟೊಗೆ ಪೋಸ್ ನೀಡಿದ್ದಾರೆ. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಪಾಕಿಸ್ತಾನದ ಪರ ಸಾಮಾಜಿಕ ಮಾಧ್ಯಮ ನಿರ್ವಹಿಸುವ ಸಂಸ್ಥೆಯೊಂದು ಪೈಲಟ್ ಶಿವಾನಿ ಸಿಂಗ್ ಅವರನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿಕೊಂಡಿತ್ತು. ಈ ಹೇಳಿಕೆಯನ್ನು ‘ಫ್ಯಾಕ್ಟ್ ಚೆಕ್’ ನಡೆಸಿದ ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊ ‘ಇದೊಂದು ಸುಳ್ಳು ಹೇಳಿಕೆ’ ಎಂದು ಸ್ಪಷ್ಟಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.