ADVERTISEMENT

ಭರ್ಜಿ ಹಿಡಿದು ಕಾಡಿನಲ್ಲಿ ಓಡಾಡಿದ ಪ‍್ರಧಾನಿ; ಎಂದೂ ಕಂಡಿರದ ಮೋದಿ!

ಮ್ಯಾನ್‌ ವರ್ಸಸ್‌_ವೈಲ್ಡ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 9:12 IST
Last Updated 12 ಆಗಸ್ಟ್ 2019, 9:12 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಕಾಡಿನಲ್ಲಿ ಕಳೆದ ಕ್ಷಣಗಳ ರೋಚಕ ಅನುಭವ ಶೀಘ್ರದಲ್ಲಿಯೇ ಕಿರುತೆರೆಯಲ್ಲಿ ಪ್ರಸಾರಗೊಳ್ಳಲಿದೆ. ಜಾಗತಿಕಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿರುವ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಈವರೆಗೂ ಕಂಡಿರದ ಮೋದಿ ಕಾಣಸಿಗಲಿದ್ದಾರೆ.

ಆಗಸ್ಟ್‌ 12ರ ರಾತ್ರಿ ಒಂಬತ್ತಕ್ಕೆ ಡಿಸ್ಕವರಿ ಚಾನೆಲ್‌ನಲ್ಲಿ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಯಾರಿಗೂ ತಿಳಿಯದ ಮೋದಿ ಅವರ ಮತ್ತೊಂದು ಆಯಾಮ ಇಲ್ಲಿ ತೆರೆದುಕೊಳ್ಳಲಿದ್ದು, 180 ರಾಷ್ಟ್ರಗಳಲ್ಲಿ ಪ್ರಸಾರಗೊಳ್ಳಲಿದೆ ಎಂದು ಚಾನೆಲ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿಕೊಂಡಿದೆ.

ಪ್ರಾಣಿ ಸಂಕುಲ ಸಂರಕ್ಷಣೆ ಮತ್ತು ಪರಿಸರ ಬದಲಾವಣೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆದಿರುವುದಾಗಿ ಕಾರ್ಯಕ್ರಮದ ನಿರೂಪಕ ಬೇರ್‌ ಗ್ರಿಲ್ಸ್‌ ಬರೆದುಕೊಂಡಿದ್ದಾರೆ. ಮನುಷ್ಯನ ನಿಯಂತ್ರಣದಲ್ಲಿರದ ಕಾಡಿನಲ್ಲಿ ಒಂಟಿಯಾಗಿ ಸಂಚರಿಸುತ್ತ ಎದುರಾಗುವ ಸಂಕಷ್ಟಗಳನ್ನು ದಾಟಿ, ಬದುಕುವ ಕಲೆಯನ್ನು ಕಂಡುಕೊಳ್ಳುವ ಪ್ರಯತ್ನ(ಮ್ಯಾನ್‌ ವರ್ಸಸ್‌ ವೈಲ್ಡ್‌)ದ ಮೂಲಕ ಗ್ರಿಲ್ಸ್‌ ಖ್ಯಾತರಾಗಿದ್ದಾರೆ.

ADVERTISEMENT

‍‘ಹಸಿರು ಕಾಡುಗಳು, ವೈವಿಧ್ಯ ಜೀವ ಸಂಕುಲ, ಸುಂದರ ಪರ್ವತಗಳು ಹಾಗೂ ಮೈತುಂಬಿ ಹರಿಯುವ ನದಿಗಳನ್ನು ನೀವು ಭಾರತದಲ್ಲಿ ಕಾಣಬಹುದು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ನಿಮಗೆ, ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡುವ ಮನಸ್ಸಾಗಲಿದೆ; ಹಾಗೇ ಪರಿಸರ ಸಂರಕ್ಷಣೆಯ ಕಡೆಗೂ ಗಮನ ಹರಿಯಲಿದೆ’ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಕಾರ್ಯಕ್ರಮದ ಬಗ್ಗೆ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಮೋದಿ ಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಪ್ಪದಲ್ಲಿ ಮಾತನಾಡುತ್ತ ಸಾಗುವುದು, ಕೋಲಿನಿಂದ ಮಾಡಿಕೊಂಡ ಆಯುಧ ಹಿಡಿದು ನಡೆಯುವುದು, ಚಳಿಯಲ್ಲಿ ನದಿ ದಡದಲ್ಲಿ ಕುಳಿತು ಮಾತು–ಕತೆ,...ಇಂಥ ಹಲವು ದೃಶ್ಯಗಳಿಂದ ಕಾರ್ಯಕ್ರಮ ಕುತೂಹಲ ಮೂಡಿಸಿದೆ.

ಈ ಕಾರ್ಯಕ್ರಮದಲ್ಲಿ ಹಿಂದೆ ಬರಾಕ್‌ ಒಬಾಮಾ(2018 ಡಿಸೆಂಬರ್‌), ಮಿಷೆಲ್‌ ಬಿ ಜಾರ್ಡನ್‌, ಜ್ಯಾಕ್‌ ಎಫ್ರಾನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.