ADVERTISEMENT

ವ್ಯಾ‍ಪಾರ ಒಪ್ಪಂದಕ್ಕೆ ಸಹಿ ಹಾಕಲು ಮೋದಿಗೆ ಎಫ್‌ಸ್ಟೈನ್ ಫೈಲ್ಸ್ ಬೆದರಿಕೆ: ರಾಹುಲ್

ಪಿಟಿಐ
Published 26 ಫೆಬ್ರುವರಿ 2026, 11:06 IST
Last Updated 26 ಫೆಬ್ರುವರಿ 2026, 11:06 IST
   

ಕಣ್ಣೂರು(ಕೇರಳ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಫ್‌ಸ್ಟೈನ್ ಫೈಲ್ಸ್‌ ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಪೆರವೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ರಾಹುಲ್, ‘ರೈತರು ದೇಶದ ಅಡಿಪಾಯ ಎಂಬ ಸರಳ ಸತ್ಯವನ್ನು ಸರ್ಕಾರ ಅರ್ಥಮಾಡಿಕೊಂಡಿಲ್ಲ’ ಎಂದರು.

‘ಅಡಿಪಾಯವನ್ನು ಗೌರವಿಸದಿದ್ದರೆ, ಯಾವುದನ್ನೂ ನಿರ್ಮಿಸಲು ಸಾಧ್ಯವಿಲ್ಲ. ಪ್ರತಿ ದಿನ ನಾವು ಆಹಾರ ತಿನ್ನುತ್ತೇವೆ. ಆದರೆ ನಮ್ಮ ತಟ್ಟೆಗೆ ಆಹಾರ ಎಲ್ಲಿಂದ ಬಂತು ಎಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

ಮುಂದುವರಿದು, ‘ಭಾರತದಲ್ಲಿ ಸಣ್ಣ ವರ್ಗದ ರೈತರಿದ್ದು, ಸಣ್ಣ ಕೃಷಿ ಯಂತ್ರಗಳನ್ನು ಹೊಂದಿದ್ದಾರೆ. ದೊಡ್ಡ ಜಮೀನುಗಳನ್ನು ಹೊಂದಿರುವ ಅಮೆರಿಕದ ರೈತರು ಅತ್ಯಾಧುನಿಕ ಯಂತ್ರಗಳನ್ನು ಹೊಂದಿದ್ದಾರೆ. ಅಮೆರಿಕದ ಕಂಪನಿಗಳಿಗೆ ಭಾರತ ಮಾರುಕಟ್ಟೆಗೆ ಪ್ರವೇಶ ನೀಡಿರುವುದು ಅಪರಾಧ ಕೃತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

‘ಹಿಂದಿನ ಯಾವುದೇ ಪ್ರಧಾನಿ ಅಮೆರಿಕದ ರೈತರು ಭಾರತದಲ್ಲಿ ಸೋಯಾಬಿನ್,ತರಕಾರಿ, ಹಣ್ಣುಗಳಂತಹ ಉತ್ಪನ್ನಗಳನ್ನು ಮಾರಾಟ ಮಾರಲು ಅವಕಾಶ ನೀಡಿಲ್ಲ’ ಎಂದರು.

‘ರೈತರಿಗಾಗಿ ದೇಶದಲ್ಲಿ ಹಸಿರು ಕ್ರಾಂತಿ, ಶ್ವೇತ ಕ್ರಾಂತಿಗಳು ನಡೆದಿವೆ. ವ್ಯಾಪಾರ ಒಪ್ಪಂದವು ಭಾರತದ ಕೃಷಿ ಅಡಿಪಾಯವನ್ನೇ ಬುಡಮೇಲು ಮಾಡಲಿದೆ’ ಎಂದು ಆತಂಕ ಹೊರಹಾಕಿದರು.

ಅದಾನಿ ಮತ್ತು ಎಫ್‌ಸ್ಟೈನ್‌:

‘ಎರಡು ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಅಲ್ಲಿ ಮಾತನಾಡಲು ನನಗೆ ಅವಕಾಶ ನೀಡಿರಲಿಲ್ಲ. ಅದರಲ್ಲಿ ಒಂದು ಇನ್ನೂ ಹೊರಬರದ ಸುಮಾರು 3.5 ಮಿಲಿಯನ್ ಎಫ್‌ಸ್ಟೈನ್‌ ಫೈಲ್‌ಗಳು. ಇವುಗಳನ್ನು ಅಮೆರಿಕ ಸರ್ಕಾರ ರಹಸ್ಯವಾಗಿಟ್ಟಿದೆ. ಭಾರತದ ಪ್ರಧಾನ ಮಂತ್ರಿಯ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಎರಡನೆಯದು ಅದಾನಿ ಪ್ರಕರಣ’ ಎಂದರು.

‘ಪ್ರಧಾನಿಯವರು ಭಾರತದ ಅಡಿಪಾಯವನ್ನೇ ನಾಶಮಾಡಲು ಸಿದ್ಧರಾಗಲು ಇದೇ ಕಾರಣ. ತಮ್ಮ ವೈಯಕ್ತಿಕ ಹಿತಾಸಕ್ತಿಗೆ ದೇಶದ ರೈತರನ್ನೇ ಬಲಿಕೊಡಲಾಗುತ್ತಿದೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.