ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: 55ನೇ ವರ್ಷಕ್ಕೆ ಕಾಲಿಟ್ಟಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, 'ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ದೊರೆಯಲಿ' ಎಂದು ಹಾರೈಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಯಶಗಳನ್ನು ಕೋರಿದ್ದು, 'ಭಾರತದ ಭವಿಷ್ಯದ ಬೆಳಕು' ಎಂದು ಬಣ್ಣಿಸಿದ್ದಾರೆ.
'ಸೈದ್ದಾಂತಿಕ ಬದ್ಧತೆ, ಜನಪರ ಕಾಳಜಿ, ಸತ್ಯನಿಷ್ಠುರತೆ, ದೇಶದ ಭವಿಷ್ಯದ ಬಗೆಗಿನ ಸ್ಪಷ್ಟ ಮುನ್ನೋಟ, ಅಪಾರ ಧೈರ್ಯ ಮತ್ತು ಪ್ರೀತಿಯನ್ನು ತುಂಬಿಕೊಂಡ
ರಾಹುಲ್ ಗಾಂಧಿಯವರನ್ನು ನನ್ನ ನಾಯಕನೆಂದು ಹೇಳಿಕೊಳ್ಳಲು ನಾನು ಹೆಮ್ಮೆ ಪಡುತ್ತೇನೆ. ಭಾರತದ ಭವಿಷ್ಯದ ಬೆಳಕು ರಾಹುಲ್ ಗಾಂಧಿಯವರಿಗೆ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹ ಶುಭಾಯಶಗಳನ್ನು ಕೋರಿದ್ದಾರೆ. 'ನಮ್ಮ ನೆಚ್ಚಿನ ಜನನಾಯಕರಾದ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿಶೇಷ ಚೇತನ ಕ್ರೀಡಾಪಟುಗಳಿಗೆ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ, ಗಾಲಿ ಕುರ್ಚಿ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದೆ' ಎಂದು ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹುಟ್ಟುಹಬ್ಬದ ಸಂದೇಶದಲ್ಲಿ, 'ಸಂವಿಧಾನದ ಮೌಲ್ಯಗಳಿಗೆ ರಾಹುಲ್ ಅವರ ನಿಷ್ಠೆ ಹಾಗೂ ಸಮರ್ಪಣೆಯನ್ನು ಉಲ್ಲೇಖಿಸಿದ್ದಾರೆ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನ್ಯಾಯಕ್ಕಾಗಿ ರಾಹುಲ್ ಅವರ ಹೋರಾಟವು ಬೇರೆಯವರಿಗಿಂತ ಭಿನ್ನವಾಗಿಸುತ್ತದೆ. ನಿಮ್ಮ ಕಾರ್ಯಗಳು ಕಾಂಗ್ರೆಸ್ ಪಕ್ಷದಲ್ಲಿ ವಿವಿಧತೆಯಲ್ಲಿ ಏಕತೆ, ಸಾಮರಸ್ಯ ಹಾಗೂ ಸಹಾನುಭೂತಿಯ ಸಿದ್ಧಾಂತವನ್ನು ಸಾರುತ್ತವೆ. ಸತ್ಯಕ್ಕಾಗಿ ಹೋರಾಡುವ ನಿಮಗೆ ದೀರ್ಘ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.