
ಚಂಢೀಗಡ: ತಮ್ಮನ್ನು ‘ದೇಶದ್ರೋಹಿ’ ಎಂದು ಟೀಕಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟೂ ಶನಿವಾರ ವಾಗ್ದಾಳಿ ಮುಂದುವರಿಸಿದ್ದಾರೆ.
‘ರಾಹುಲ್ ಗಾಂಧಿ ಅವರು ಬುಧವಾರ ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಬಳಿ ನನ್ನತ್ತ ಕೈ ತೋರಿಸಿ, ಕೋಪದಿಂದ ಧಾವಿಸಿ ಬಂದರು. ಅವರ ಒಂದು ತೋಳನ್ನು ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್, ಮತ್ತೊಂದು ತೋಳನ್ನು ಗುರುದಾಸಪುರ ಸಂಸದ ಸುಖಜಿಂದರ್ ರಾಂಧವ ಹಿಡಿದುಕೊಂಡಿದ್ದರು. ‘ಅವರ ಉದ್ದೇಶ ಏನಿತ್ತೋ, ದೇವರಿಗೆ ಮಾತ್ರ ಗೊತ್ತು’ ಎಂದರು.
‘ದೇಶದ್ರೋಹಿ’ ಹೇಳಿಕೆಯ ಮೂಲಕ ರಾಹುಲ್ ತಮ್ಮ ಗೌರವವನ್ನು ಕಡಿಮೆ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಟ್ಟೂ, ‘ರಾಜಕೀಯದಲ್ಲಿ ನಾವು ಸಿದ್ಧಾಂತದ ಬಗ್ಗೆ ಮಾತನಾಡುತ್ತೇವೆ, ಆದರೆ, ವೈಯಕ್ತಿಕ ದಾಳಿ ಮಾಡುವುದಿಲ್ಲ’ ಎಂದರು.
‘ಅವರ ಒಳಗಿದ್ದ ಬಲೂನು ಒಡೆದಿದೆ. ದೊಡ್ಡ ಕುಟುಂಬದ (ಗಾಂಧಿ) ಹಿನ್ನೆಲೆಯಿಂದ ಬಂದಿರುವ ಅವರು ಏನು ಮಾತನಾಡಿದ್ದಾರೆ ಎನ್ನುವುದನ್ನು ಗಮನಿಸಿ. ತಮ್ಮನ್ನು ಚಕ್ರವರ್ತಿ ಎನ್ನುವಂತೆ ಭಾವಿಸಿಕೊಂಡು ನನಗೆ ಹಸ್ತಲಾಘವ ನೀಡಲು ಮುಂದಾದರು‘ ಎಂದು ಬಿಟ್ಟೂ ಹೇಳಿದರು.
‘ನಾನು ಕಾಂಗ್ರೆಸ್ ಅನ್ನು ಅರ್ಧದಲ್ಲಿ ಬಿಟ್ಟು ಬಂದಿಲ್ಲ. ಮೂರು ಬಾರಿ ಕಾಂಗ್ರೆಸ್ ಸಂಸದನಾಗಿ ಅವಧಿ ಪೂರ್ಣಗೊಳಿಸಿದ ನಂತರವೇ ಬಿಜೆಪಿ ಸೇರಿದ್ದೇನೆ’ ಎಂದು ಬಿಟ್ಟೂ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಿಟ್ಟೂ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ರಾಹುಲ್ ಅವರ ನಿಕಟವರ್ತಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.