
ಇಂದೋರ್: ‘ದೇಶದ ಅತ್ಯಂತ ಸ್ವಚ್ಛ ನಗರವೆಂದು ಖ್ಯಾತಿ ಪಡೆದ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಜನರು ಸಾಯಲು ಸರ್ಕಾರವೇ ಕಾರಣ. ಇದರಿಂದ ಮಾದರಿ ನಗರಗಳ ಕುರಿತಂತೆ ಅನುಮಾನ ಹುಟ್ಟುಹಾಕಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಕುಡಿದು ವಾಂತಿ ಹಾಗೂ ಭೇದಿಯಿಂದಾಗಿ ಮೃತಪಟ್ಟ ಕುಟುಂಬದ ಸದಸ್ಯರನ್ನು ಶನಿವಾರ ಭೇಟಿಯಾಗಿ ಸಾಂತ್ವನ ತಿಳಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಶುದ್ಧ ನೀರು ಸಾರ್ವಜನಿಕರ ಹಕ್ಕು’ ಎಂದು ಪ್ರತಿಪಾದಿಸಿದ್ದಾರೆ.
‘ಇಂದೋರ್ ಅನ್ನು ಕೇಂದ್ರ ಸರ್ಕಾರವು ‘ಮಾದರಿ ಸ್ಮಾರ್ಟ್ ನಗರ’ ಎಂದು ಕರೆದಿದೆ. ಆದರೆ, ಇಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜನರು ಕೂಡ ಭಯಭೀತರಾಗಿದ್ದಾರೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೀತು ಪಟವಾರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಜೊತೆಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಸಮಸ್ಯೆ ಸೃಷ್ಟಿಯಾಗಿದ್ದ ಭಾಗೀರಥಿಪುರಕ್ಕೆ ತೆರಳಿ, ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ, ಸಾಂತ್ವನ ಹೇಳಿದರು.
‘ಶುದ್ಧ ಕುಡಿಯುವ ನೀರು ಒದಗಿಸುವುದು ಹಾಗೂ ಮಾಲಿನ್ಯ ನಿಯಂತ್ರಣ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ, ಸರ್ಕಾರವು ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಆರೋಪಿಸಿದ್ದಾರೆ.
‘ಇದುವೇ ನಗರ ಮಾದರಿಯಾಗಿದೆ. ಇದು ಕೇವಲ ಇಂದೋರ್‌ಗಷ್ಟೇ ಸೀಮಿತವಲ್ಲ. ಇಡೀ ದೇಶದಾದ್ಯಂತ ಇಂತಹ ಸಮಸ್ಯೆ ಇರುವುದನ್ನು ಕಾಣಬಹುದಾಗಿದೆ’ ಎಂದು ಹೇಳಿದ್ದಾರೆ.
‘ಇಂದೋರ್ ದುರಂತದ ಕುರಿತು ಸರ್ಕಾರದ ಯಾರಾದರೂ ಒಬ್ಬರು ಜವಾಬ್ದಾರಿ ಹೊರಬೇಕು. ಸರ್ಕಾರದ ನಿರ್ಲಕ್ಷ್ಯದಿಂದಲೇ ಜನರು ಅಶುದ್ಧ ನೀರು ಕುಡಿದು ಮೃತಪಟ್ಟಿದ್ದಾರೆ. ಸರ್ಕಾರವು ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವುದರ ಜೊತೆಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
‘ದುರಂತದಿಂದ ಜನರು ಮೃತಪಡುತ್ತಿದ್ದರೆ, ಬಿಜೆಪಿ ನಾಯಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಸರ್ಕಾರವು ಅಸೂಕ್ಷ್ಮವಾಗಿ ವರ್ತಿಸುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಸಂತ್ರಸ್ತರ ಜೊತೆಗೆ ನಾವು ನಿಲ್ಲಲ್ಲಿದ್ದೇವೆ. ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಪ್ರಮುಖಾಂಶಗಳು
ಕಲುಷಿತ ನೀರು ಕುಡಿದು ಇದುವರೆಗೆ 24 ಮಂದಿ ಸಾವು ಸಂತ್ರಸ್ತರ ಪ್ರತಿ ಕುಟುಂಬಕ್ಕೆ ಕಾಂಗ್ರೆಸ್‌ನಿಂದ ತಲಾ ₹1 ಲಕ್ಷ ನೆರವು
ಕಾಂಗ್ರೆಸ್ ನಾಯಕ ಉಮಂಗ್ ಸಿಂಘಾರ್ ಅವರಿಂದ ತಲಾ ₹50 ಸಾವಿರ ನೆರವು
ದುರಂತದ ವಸ್ತುಸ್ಥಿತಿ ಕುರಿತಂತೆ ಹೈಕೋರ್ಟ್‌ಗೆ ವರದಿ ಸಲ್ಲಿಕೆ
ಶುದ್ಧ ಕುಡಿಯುವ ನೀರು ಜನರ ಹಕ್ಕು. ವಿಷಾದವೆಂದರೆ ಬಿಜೆಪಿ ಸರ್ಕಾರಕ್ಕೆ ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ
ಭೋಪಾಲ್: ‘1984ರಲ್ಲಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕೇಂದ್ರದಿಂದ ಅನಿಲ ದುರಂತ ಸಂಭವಿಸಿ ಸಾವಿರಾರು ಮಂದಿ ಮೃತಪಟ್ಟಿದ್ದರೂ ಆ ಕಂಪನಿಯ ಮಾಲೀಕ ವಾರನ್ ಆ್ಯಂಡರ್ಸನ್‌ಗೆ ಭಾರತ ಬಿಟ್ಟು ಪರಾರಿಯಾಗಲು ಕಾಂಗ್ರೆಸ್ ಪಕ್ಷವೇ ಅವಕಾಶ ಮಾಡಿಕೊಟ್ಟಿತ್ತು’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಆರೋಪಿಸಿದ್ದಾರೆ.
ಭಾಗೀರಥಿಪುರ ಸಂತ್ರಸ್ತರನ್ನು ರಾಹುಲ್ ಗಾಂಧಿ ಭೇಟಿಯಾಗಲು ಇಂದೋರ್‌ಗೆ ಬಂದಿಳಿದ ಬೆನ್ನಲ್ಲೇ ಅವರು ತಿರುಗೇಟು ನೀಡಿದ್ದಾರೆ.
‘194ರ ಡಿಸೆಂಬರ್ 2 ಹಾಗೂ 3ರಂದು ಸಂಭವಿಸಿದ ಅನಿಲ ದುರಂತದಲ್ಲಿ ಸಾವಿವಾರು ಮಂದಿ ಮೃತಪಟ್ಟಿದ್ದರೂ ರಾಜ್ಯ ಹಾಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಇದರಿಂದ ಲಕ್ಷಾಂತರ ಮಂದಿ ಜೀವನಪೂರ್ತಿ ಕಾಯಿಲೆಯಿಂದ ನರಳುವಂತಾಯಿತು. ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ಕೈಗಾರಿಕ ದುರಂತದ ಬಳಿಕ ಸಂಸ್ಥೆಯ ಮಾಲೀಕ ಆ್ಯಂಡರ್ಸನ್ ಭಾರತಕ್ಕೆ ಭೇಟಿ ನೀಡಿದ್ದರು. ಆದರೆ ಇಲ್ಲಿನ ಸರ್ಕಾರದ ನೆರವಿನಿಂದ ಮರಳಿ ಅಮೆರಿಕಕ್ಕೆ ತೆರಳಿದ್ದರು. ವಿಚಾರಣೆಗೂ ಹಾಜರಾಗಿರಲಿಲ್ಲ. 92ರ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದರು’ ಎಂದು ನೆನಪಿಸಿದ್ದಾರೆ.
‘ಆ್ಯಂಡರ್ಸನ್ ಪರಾರಿಯಾಗಲು ನೆರವಾಗುವ ಮೂಲಕ ಕಾಂಗ್ರೆಸ್ ದೊಡ್ಡ ಪಾಪದ ಕೆಲಸ ಮಾಡಿತ್ತು. ಅವರು ಪರಾರಿಯಾಗುವಲ್ಲಿ ಕಾಂಗ್ರೆಸ್ ನಾಯಕರ ಪಾತ್ರವೇ ಪ್ರಮುಖವಾಗಿತ್ತು. ಅವರ ಅಜ್ಜಿ ಹಾಗೂ ತಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಡೆದ ದುರಂತದ ಕುರಿತು ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಿ ಸಂಪೂರ್ಣ ಜವಾಬ್ದಾರಿ ಹೊರಬೇಕು’ ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.