
ಮುಂಬೈ: ‘ಸತಾರಾ ಜಿಲ್ಲೆಯ ಫಲ್ಟನ್‌ನಲ್ಲಿ 28 ವರ್ಷದ ವೈದ್ಯೆಯ ಆತ್ಮಹತ್ಯೆಯು ‘ಸಾಂಸ್ಥಿಕ ಕೊಲೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಈ ಘಟನೆಯು ಬಿಜೆಪಿ ಸರ್ಕಾರದ ಅಮಾನವೀಯ ಮತ್ತು ಸಂವೇದನಾರಹಿತ ಮುಖವನ್ನು ಬಹಿರಂಗಪಡಿಸುತ್ತದೆ. ಅತ್ಯಾಚಾರ ಮತ್ತು ಕಿರುಕುಳದಿಂದ ವೈದ್ಯೆಯು ಹತಾಶೆಗೆ ಒಳಗಾಗಿರುವುದು ಯಾವುದೇ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸುವಂತಹ ದುರಂತವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಇತರರ ನೋವನ್ನು ನಿವಾರಿಸಲು ಹಾತೊರೆಯುತ್ತಿದ್ದ ಭರವಸೆಯ ವೈದ್ಯೆಯೊಬ್ಬರು ಭ್ರಷ್ಟ ವ್ಯವಸ್ಥೆ ಮತ್ತು ಅಧಿಕಾರ ವ್ಯವಸ್ಥೆಯೊಂದಿಗೆ ಬೇರೂರಿರುವ ದುಷ್ಕರ್ಮಿಗಳ ಕಿರುಕುಳಕ್ಕೆ ಬಲಿಯಾಗಿದ್ದಾರೆ. ದುಷ್ಕರ್ಮಿಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕಾರ್ಯವನ್ನು ಮಾಡದ ಅಧಿಕಾರ ವ್ಯವಸ್ಥೆಯೇ ಈ ಮುಗ್ಧ ಮಹಿಳೆಯ ಮೇಲೆ ಅತ್ಯಂತ ಘೋರ ಅಪರಾಧವನ್ನು ಎಸಗಿದೆ’ ಎಂದು ಆರೋಪಿಸಿದ್ದಾರೆ.
‘ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಕೆಲ ಪ್ರಭಾವಿಗಳು ಕೂಡ ವೈದ್ಯೆ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ’ ಎಂದು ರಾಹುಲ್ ಗಾಂಧಿ ಅವರು ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ.
‘ಇದು ಆತ್ಮಹತ್ಯೆಯಲ್ಲ, ಸಾಂಸ್ಥಿಕ ಕೊಲೆ. ಅಧಿಕಾರವು ದುಷ್ಕರ್ಮಿಗಳಿಗೆ ಗುರಾಣಿಯಾದಾಗ ಯಾರಿಂದ ನ್ಯಾಯವನ್ನು ನಿರೀಕ್ಷಿಸಬಹುದು? ಸಂತ್ರಸ್ತೆಯ ಕುಟುಂಬದೊಂದಿಗೆ ಕಾಂಗ್ರೆಸ್ ನಿಲ್ಲುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.