ರಾಹುಲ್ ಗಾಂಧಿ, ಅರ್ಜುನ್ ಮೊಧ್ವಾಡಿಯಾ
ಗಾಂಧಿನಗರ: 'ವಂಶಪಾರಂಪರ್ಯವಾಗಿ ಪಕ್ಷದ ಅಧಿಕಾರ ದಕ್ಕಿದ್ದರೂ, ಕಾಂಗ್ರೆಸ್ ಮುಖಂಡರೂ ಆಗಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕನಿಕಗೆ ಕತ್ತೆಗೂ ಮತ್ತು ಕುದುರೆಗೂ ವ್ಯತ್ಯಾಸ ಗೊತ್ತಿಲ್ಲ’ ಎಂದು ಗುಜರಾತ್‌ನ ಬಿಜೆಪಿ ಶಾಸಕ ಅರ್ಜುನ್ ಮೊಧ್ವಾಡಿಯಾ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ಅರ್ಜುನ್, ನಂತರ ಬಿಜಿಪಿಗೆ ಸೇರಿದ್ದರು. 2024ರ ಚುನಾವಣೆಯಲ್ಲಿ ಪೋರಬಂದರ್ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದರು. ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮಾತನಾಡಿರುವ ಅವರು ರಾಹುಲ್ ಗಾಂಧಿ ಹೆಸರು ತೆಗೆದುಕೊಳ್ಳದೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ಎಂದೇ ಸಂಬೋಧಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ವಂಶಪಾರಂಪಾರ್ಯವಾಗಿ ಅಧಿಕಾರ ಪಡೆದವರು ಹಿರಿಯರ ಜ್ಞಾನ ಮತ್ತು ನೈತಿಕ ಮೌಲ್ಯಗಳನ್ನಾದರೂ ಪಡೆದಿರುತ್ತಾರೆ. ಆದರೆ ಈ ನಾಯಕ ಮಾತ್ರ ಇಡೀ ಪಕ್ಷವನ್ನು ಮಾತ್ರ ಪಡೆದಿದ್ದಾರೆ. ಗುಜರಾತ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಈ ನಾಯಕನಿಗೆ ಅವರದ್ದೇ ಪಕ್ಷದಲ್ಲಿ ಗೆಲ್ಲುವ ಕುದುರೆ ಯಾವುದು, ಮದುವೆಯಲ್ಲಿ ವರನನ್ನು ಹೊತ್ತು ಸಾಗುವ ಕುದುರೆ ಯಾವುದು ಎಂಬುದು ತಿಳಿಯದು’ ಎಂದು ಅರ್ಜುನ್ ಟೀಕಿಸಿದ್ದಾರೆ.
‘ನಾನು ಕಾಂಗ್ರೆಸ್‌ನಲ್ಲಿದ್ದಾಗ 2012ರಲ್ಲಿ ಇದೇ ಭಾಷಣ ಕೇಳಿದ್ದೆ. 13 ವರ್ಷಗಳ ನಂತರ ಮತ್ತದೇ ಭಾಷಣ ಮಾಡಿದ್ದಾರೆ. ಇಷ್ಟೇ ಏಕೆ, ಕತ್ತೆ ಮತ್ತು ಕುದುರೆ ನಡುವಿನ ವ್ಯತ್ಯಾಸವೂ ಈ ನಾಯಕನಿಗೆ ತಿಳಿಯದು’ ಎಂದಿದ್ದಾರೆ.
‘ಗುಜರಾತ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಈ ನಾಯಕ, ಪಕ್ಷವನ್ನು ಶುಚಿಗೊಳಿಸಲು 40 ನಾಯಕರನ್ನು ಉಚ್ಛಾಟಿಸುವುದು ಅನಿವಾರ್ಯ ಎಂದಿದ್ದಾರೆ. ಅಮಿತ್ ಚಾವ್ಡಾ, ತುಷಾರ್ ಚೌಧರಿ ಅವರಂತ ಪಕ್ಷಕ್ಕೆ ನಿಷ್ಠರಾಗಿ ನಿರಂತರವಾಗಿ ದುಡಿದವರು ಅವರ ಮುಖಂಡನಿಂದ ಇಂಥದ್ದೊಂದು ‘ಪ್ರಮಾಣಪತ್ರ’ ಪಡೆದರೆಂದರೆ ನನಗೆ ವ್ಯಥೆಯಾಗುತ್ತಿದೆ. ಉಚ್ಛಾಟಿಸಲಿರುವ 40ರಿಂದ 50 ಮುಖಂಡರ ಪಟ್ಟಿಯನ್ನು ಈ ಇಬ್ಬರು ಕೇಳಿ ಪಡೆಯಬೇಕು’ ಎಂದು ಮೊಧ್ವಾಡಿಯಾ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.