ADVERTISEMENT

ತಾಕತ್ತಿದ್ದರೆ ಜೋಡೊ ಯಾತ್ರೆ ನಿಲ್ಲಿಸಿ: ಮಹಾರಾಷ್ಟ್ರ ಸರ್ಕಾರಕ್ಕೆ ರಾಹುಲ್‌ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2022, 12:18 IST
Last Updated 17 ನವೆಂಬರ್ 2022, 12:18 IST
   

ಅಕೋಲಾ (ಮಹಾರಾಷ್ಟ್ರ): ‘ತಾಕತ್ತಿದ್ದರೆ ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

ವಿ.ಡಿ ಸಾವರ್ಕರ್‌ ಬಗ್ಗೆ ಅವರು ಟೀಕೆ ಮಾಡಿದ ಬಳಿಕ, ಮಹಾರಾಷ್ಟ್ರದ ಆಡಳಿತರೂಢ ಬಿಜೆಪಿ ಹಾಗೂ ಶಿವಸೇನಾ ಪಕ್ಷಗಳು ರಾಹುಲ್‌ ಗಾಂಧಿ ವಿರುದ್ಧ ಟೀಕೆಗಳ ಮಳೆಗೈದಿದ್ದವು. ಉದ್ಧವ್‌ ಠಾಕ್ರೆ ಕೂಡ ರಾಹುಲ್ ಗಾಂಧಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ತಾಕತ್ತಿದ್ದರೆ ಯಾತ್ರೆ ನಿಲ್ಲಿಸಿ ಎಂದು ರಾಹುಲ್‌ ಗಾಂಧಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ADVERTISEMENT

‘ಸರ್ಕಾರಕ್ಕೆ ಯಾತ್ರೆ ನಿಲ್ಲಿಸಬೇಕು ಎಂದು ಇದ್ದರೆ, ನಿಲ್ಲಿಸಿ ನೋಡೋಣ‘ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ‌.

ಸ‌ದ್ಯ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ ಮಹಾರಾಷ್ಟ್ರದಲ್ಲಿ ಸಾಗುತ್ತಿದೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಭಾರತ್‌ ಜೋಡೊ ಯಾತ್ರೆಯ ಭಾಗವಾಗಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ ಪತ್ರವೊಂದನ್ನು ಪ್ರದರ್ಶಿಸಿದ ರಾಹುಲ್‌ ಗಾಂಧಿ, ಇದು ಸಾವರ್ಕರ್‌ ಅವರು ಬ್ರಿಟಿಷ್‌ ಸರ್ಕಾರಕ್ಕೆ ಬರೆದ ಕ್ಷಮಾಪಣೆ ಪತ್ರ ಎಂದಿದ್ದರು.

'ನಿಮ್ಮ ವಿಧೇಯ ಸೇವಕನನ್ನಾಗಿ ನನ್ನನ್ನು ಉಳಿಸಿಕೊಳ್ಳುವಂತೆ ನಾನು ಬೇಡಿಕೊಳ್ಳುತ್ತಿದ್ದೇನೆ' ಎಂದಿರುವ ಪತ್ರದ ಕೊನೆಯ ಸಾಲನ್ನು ರಾಹುಲ್‌ ಗಾಂಧಿ ಓದಿ ಹೇಳಿದರು. ಪತ್ರದಲ್ಲಿ ವಿ.ಡಿ. ಸಾವರ್ಕರ್‌ ಅವರ ಸಹಿ ಇದೆ ಎಂದು ಒತ್ತಿ ಹೇಳಿದ್ದರು.

ಭಯದಿಂದ ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಸಹಿ ಮಾಡಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿ, ಸರ್ದಾರ್‌ ಪಟೇಲ್‌, ಪಂಡಿತ್‌ ನೆಹರೂ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು.

ರಾಹುಲ್‌ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಉದ್ಧವ್‌ ಠಾಕ್ರೆ, ‘ರಾಹುಲ್‌ ಗಾಂಧಿ ಅವರ ಈ ಹೇಳಿಕೆಯನ್ನು ಒಪ್ಪುವುದಿಲ್ಲ‘ ಎಂದು ನುಡಿದಿದ್ದರು.

‘ರಾ‌ಹುಲ್‌ ಗಾಂಧಿ ನಾಚಿಕೆ ಇಲ್ಲದೆ ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿದ್ದಾರೆ‘ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.