ರಾಹುಲ್ ಗಾಂಧಿ
ಸುಲ್ತಾನ್‌ಪುರ: ಸಹೋದ್ಯೋಗಿಯೊಬ್ಬರ ಸಾವಿಗೆ ಸಂತಾಪಾರ್ಥ ವಕೀಲರು ಕೆಲಸಕ್ಕೆ ಹಾಜರಾಗದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ನ್ಯಾಯಾಲಯ ಮಂದೂಡಿದೆ.
ಕಮಲ್ ಶ್ರೀವಾತ್ಸವ ಎನ್ನುವ ವಕೀಲರು ಮೃತಪಟ್ಟಿದ್ದರಿಂದ ಬಾರ್ ಸಂಘವು ಸೋಮವಾರ ಕೆಲಸ ರಹಿತ ದಿನವೆಂದು ಆಚರಿಸಿತ್ತು. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಜುಲೈ 1ಕ್ಕೆ ಕೋರ್ಟ್ ಮುಂದೂಡಿತು.
2018ರ ಕರ್ನಾಟಕ ಚುನಾವಣೆ ಪ್ರಚಾರದ ವೇಳೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಜಯ್ ಮಿಶ್ರಾ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.
ಏಪ್ರಿಲ್ 28ರಂದು ನಡೆದ ಹಿಂದಿನ ವಿಚಾರಣೆ ವೇಳೆ ದೂರುದಾರರು, ಕೊತ್ವಾಲಿ ದೆಹತ್‌ನ ಪಿತಾಂಬರಪುರ ನಿವಾಸಿ ಅನಿಲ್ ಮಿಶ್ರಾ ಎಂಬವರನ್ನು ಸಾಕ್ಷಿಯಾಗಿ ಹಾಜರುಪಡಿಸಿದ್ದರು.
ರಾಹುಲ್ ಗಾಂಧಿ ಪರ ವಕೀಲ ಕಾಶಿ ಪ್ರಸಾದ್ ಶುಕ್ಲಾ ಈಗಾಗಲೇ ಸಾಕ್ಷಿದಾರರಿಗೆ ಪಾಟಿ ಸವಾಲು ಹಾಕಿದ್ದಾರೆ.
2023ರ ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ವಾರೆಂಟ್ ಹೊರಡಿಸಿತ್ತು. 2024ರ ಫೆಬ್ರುವರಿಯಲ್ಲಿ ಕೋರ್ಟ್‌ಗೆ ಶರಣಾಗಿದ್ದರು. ₹25 ಸಾವಿರ ಎರಡು ಶ್ಯೂರಿಟಿಗಳ ಮೇಲೆ ಜಾಮೀನು ಪಡೆದಿದ್ದರು.
ಕಳೆದ ವರ್ಷ ಜುಲೈ 26ರಂದು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ತಾನು ತಪ್ಪಿತಸ್ಥನಲ್ಲವೆಂದೂ, ರಾಜಕೀಯ ಪಿತೂರಿಯ ಭಾಗವಾಗಿ ದೂರು ನೀಡಲಾಗಿದೆ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.