ADVERTISEMENT

ಜನ ನಾಯಗನ್‌ಗೆ ನಿರ್ಬಂಧ ಯತ್ನ; ತಮಿಳು ಸಂಸ್ಕೃತಿ ಮೇಲಿನ ದಾಳಿ: ರಾಹುಲ್ ಗಾಂಧಿ

ಪಿಟಿಐ
Published 13 ಜನವರಿ 2026, 10:51 IST
Last Updated 13 ಜನವರಿ 2026, 10:51 IST
   

ನವದೆಹಲಿ: ‘ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಚಲನಚಿತ್ರವನ್ನು ನಿರ್ಬಂಧಿಸುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಯತ್ನವು ತಮಿಳು ಸಂಸ್ಕೃತಿಯ ಮೇಲಿನ ದಾಳಿಯಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಮೋದಿ ಅವರೇ, ನೀವು ತಮಿಳರ ಧ್ವನಿಯನ್ನು ಹತ್ತಿಕ್ಕುವಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ’ ಎಂದು ರಾಹುಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಲ್ಲದೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯನ್ನು ಡಿಎಂಕೆ ಪಕ್ಷವು ಟೀಕಿಸಿದೆ.

ADVERTISEMENT

ಸಿನಿಮಾ ಬಿಡುಗಡೆಗೆ ಜನವರಿ 9ರಂದು ದಿನ ನಿಗದಿಯಾಗಿತ್ತು. ಆದರೆ, ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆ ವಿಳಂಬಗೊಂಡಿದೆ. ರಾಜಕೀಯ ಪ್ರವೇಶಿಸಿರುವ ವಿಜಯ್‌ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ಕಾರಣ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಜನ ನಾಯಗನ್‌: ಅರ್ಜಿ ವಿಚಾರಣೆ ಜ.19ಕ್ಕೆ

‘ಜನ ನಾಯಗನ್’ ಚಲನಚಿತ್ರಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡುವಂತೆ ನಿರ್ದೇಶಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಮದ್ರಾಸ್‌ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕೆವಿಎನ್‌ ಪ್ರೊಡಕ್ಷನ್ಸ್‌ ಎಲ್‌ಎಲ್‌ಪಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಜ.19ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಪೀಠವನ್ನು ಇನ್ನೂ ನಿಯೋಜಿಸಿಲ್ಲ. ‘ಜನ ನಾಯಗನ್’ಗೆ ತಕ್ಷಣ ಸೆನ್ಸಾರ್‌ ಪ್ರಮಾಣಪ‍ತ್ರ ನೀಡಬೇಕು ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಏಕಸದಸ್ಯ ಪೀಠ ನಿರ್ದೇಶನ ನೀಡಿತ್ತು. ಈ ಆದೇಶಕ್ಕೆ ಮದ್ರಾಸ್‌ ಹೈಕೋರ್ಟ್‌ ಜ. 9ರಂದು ತಡೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.